ದೇಶೀಯ ಆಹಾರ ಉತ್ಪನ್ನ ಮಾರುಕಟ್ಟೆಯಲ್ಲಿ ಶೇ.100 ರಷ್ಟು ಎಫ್ ಡಿಐ: ಜೇಟ್ಲಿ

ಆಹಾರ ಸಂಸ್ಕರಣೆ, ದೇಶೀಯ ಆಹಾರ ಉತ್ಪನ್ನ ಮಾರುಕಟ್ಟೆ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡುವುದಾಗಿ ಬಜೆಟ್ ನಲ್ಲಿ ಅರುಣ್ ಜೆಟ್ಲಿ ಘೋಷಿಸಿದ್ದಾರೆ.

ನವದೆಹಲಿ: 2016 -17 ರ ಬಜೆಟ್ ನಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ, ಆಹಾರ ಸಂಸ್ಕರಣೆ, ದೇಶೀಯ ಆಹಾರ ಉತ್ಪನ್ನ ಮಾರುಕಟ್ಟೆ  ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.  
ಆಹಾರ ಸಂಸ್ಕರಣೆಯಲ್ಲಿ ಶೇ.100 ರಷ್ಟು ಎಫ್ ಡಿಐ ಗೆ ಅನುಮತಿ ನೀಡುವುದರಿಂದ ದೇಶದ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದು, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಈ ಯೋಜನೆಗೆ ಅನುಮತಿ ನೀಡಲಿದೆ ಎಂದಿದ್ದಾರೆ.  
ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡುವುದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರ ಪ್ರಮುಖ ಬೇಡಿಕೆಯಾಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಸಚಿವೆ, ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀದುವುದರಿಂದ ಕೃಷಿ ತಂತ್ರಜ್ಞಾನ ಅಭಿವೃದ್ಧಿ, ಪೋಲಾಗುವುದನ್ನು ಕಡಿಮೆಗೊಳಿಸುವುದು ಹಾಗೂ ಸ್ಥಿರ ಬೆಲೆಗೆ ತಾಜಾ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳ ಲಭ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
ದೇಶೀಯ ಆಹಾರ ಉತ್ಪನ್ನಗಳ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯಿಂದ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾಗಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಪರಿಚಯವಾಗಲಿದೆ ಎಂದು ಹರ್ಸಿಮ್ರತ್ ಕೌರ್ ಬಾದಲ್ ಪತ್ರದಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com