
ನವದೆಹಲಿ: ಪ್ರತಿವರ್ಷ ಬಜೆಟ್ ಮಂಡಿಸುವ ಸಮಯದಲ್ಲಿ ಸಂಬಂಧಪಟ್ಟ ಸಚಿವರು ಸೂಟ್ ಕೇಸು ಬ್ಯಾಗ್ ಹಿಡಿದುಕೊಂಡು ಲೋಕಸಭೆಯ ಒಳಗೆ, ರಾಜ್ಯಗಳಲ್ಲಾದರೆ ವಿಧಾನಸಭೆಯ ಒಳಗೆ ಬರುತ್ತಾರೆ. ಅದನ್ನು ಎಲ್ಲರಿಗೂ ಮಾಧ್ಯಮದ ಕ್ಯಾಮರಾಗಳಿಗೆ ಎತ್ತಿ ತೋರಿಸುತ್ತಾರೆ. ಇದು ಎಲ್ಲಾ ಬಜೆಟ್ ಮಂಡನೆಯ ಆರಂಭಕ್ಕೆ ಕಂಡುಬರುವ ಅಂಶ.
ಹಾಗಾದರೆ ಈ ಬಜೆಟ್ ಮಂಡನೆಗೂ, ಸೂಟ್ ಕೇಸಿಗೂ ಏನು ಸಂಬಂಧ? ಬಜೆಟ್ ಎಂಬ ಹೆಸರು ಬಂದಿರುವುದು ಫ್ರೆಂಚ್ ಶಬ್ದ ಬೌ ಗೆಟ್ಟೆ ಎಂಬ ಶಬ್ದದಿಂದ. ಅದರ ಅರ್ಥ ಸಣ್ಣ ಬ್ಯಾಗ್ ಎಂದು. ಈಗ ನಿಮಗೆ ಅರ್ಥವಾಗಿರಬಹುದು ಬಜೆಟ್ ಗೂ, ಬ್ಯಾಗಿಗೂ ಏನು ಸಂಬಂಧ, ಬಜೆಟ್ ಮಂಡಿಸುವ ಸಚಿವರು ಬ್ಯಾಗ್ ನ್ನು ಬಜೆಟ್ ಮಂಡನೆಗೆ ಹೊತ್ತುಕೊಂಡು ಬರುತ್ತಾರೆ ಎಂದು. ಈ ಬ್ಯಾಗಿಗೆ 150 ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಇಂಗ್ಲೆಂಡ್ ಸರ್ಕಾರದಲ್ಲಿ ಸಚಿವರು 1860ರಲ್ಲಿಯೇ ಬಜೆಟ್ ಅಂಕಿಅಂಶಗಳನ್ನು ಬ್ಯಾಗಿನಲ್ಲಿ ಹೊತ್ತು ತರುತ್ತಿದ್ದರಂತೆ.
ಇಂಗ್ಲೆಂಡಿನಲ್ಲಿ ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆಗೆ ಬ್ಯಾಗ್ ಉಪಯೋಗಿಸಿದರಂತೆ. ಅಂದಿನ ಹಣಕಾಸು ಸಚಿವ ವಿಲಿಯಮ್ ಎವರ್ಟ್ ಗ್ಲಾಡ್ ಸ್ಟೋನ್ ಅಂದು ರಾಜನ ಮುದ್ರೆಯಿರುವ ಚಿನ್ನದ ಲೇಪಿತ ಕೆಂಪು ಸೂಟ್ ಕೇಸ್ ಬ್ಯಾಗ್ ನ್ನು ಬಜೆಟ್ ಮಂಡನೆಗೆ ತಂದಿದ್ದರಂತೆ. ಗ್ಲಾಡ್ ಸ್ಟೋನ್ ಸಾಮಾನ್ಯವಾಗಿ ಉದ್ದುದ್ದ ಭಾಷಣ ಮಾಡುತ್ತಿದ್ದರಂತೆ. ಅವುಗಳ ಪೇಪರ್ ಗಳನ್ನು ಎಲ್ಲಿ ಇಟ್ಟುಕೊಳ್ಳುವುದು, ಸಮಸ್ಯೆಯಾಗುತ್ತದೆ ಎಂದು ಎಲ್ಲವನ್ನೂ ಒಟ್ಟಿಗೆ ಸೇರಿಸಿ ಸೂಟ್ ಕೇಸ್ ನಲ್ಲಿ ಹಾಕಿ ತರುತ್ತಿದ್ದರಂತೆ. ನಂತರ 2010ರವರೆಗೆ ಬ್ರಿಟಿಷ್ ಸಂಸತ್ತಿನಲ್ಲಿ ಪ್ರತಿ ಬಜೆಟ್ ಗೂ ಸೂಟ್ ಕೇಸನ್ನು ಹೊತ್ತೊಯ್ಯಲಾಗುತ್ತಿತ್ತು. ಆದರೆ ನಂತರ ಕೆಂಪು ಬಣ್ಣದ ರಾಜನ ಮುದ್ರೆಯಿರುವ ಚಿನ್ನ ಲೇಪಿತ ಸೂಟ್ ಕೇಸ್ ಗೆ ಇತಿಶ್ರೀ ಹಾಡಲು ಸರ್ಕಾರ ನಿರ್ಧರಿಸಿತು. ಈಗ ಅದೇ ತರಹದ ಬಾಕ್ಸ್ ನ್ನು ಇಂಗ್ಲೆಂಡ್ ಸರ್ಕಾರದಲ್ಲಿ ಸಚಿವರು ಹೊತ್ತು ತರುತ್ತಾರೆ. ಆದರೆ ಅದರಲ್ಲಿ ರಾಜನ ಭಾವಚಿತ್ರದ ಮುದ್ರೆಯಿರುವುದಿಲ್ಲವಷ್ಟೆ.
ಭಾರತದಲ್ಲಿ ಸದನಕ್ಕೆ ಬಜೆಟ್ ಮಂಡನೆಗೆ ಬ್ಯಾಗ್ ಹೊತ್ತು ತರುವ ಸಂಪ್ರದಾಯ ಸ್ವಾತಂತ್ರ್ಯ ಸಿಕ್ಕಿದ ನಂತರ ಆರ್.ಕೆ.ಷಣ್ಮುಗಮ್ ಚೆಟ್ಟಿ ಅವರು ನವೆಂಬರ್ 26, 1947ರಲ್ಲಿ ಮೊದಲ ಬಾರಿಗೆ ನಾಂದಿಹಾಡಿದರು. ಆಗ ಚೆಟ್ಟಿಯವರು ಕಪ್ಪು ಬಣ್ಣದ ಗೆರೆ ಗೆರೆಯ ಸೂಟ್ ನ್ನು ಧರಿಸಿದ್ದರು. ಚರ್ಮದ ಬ್ಯಾಗನ್ನು ಹೊತ್ತು ತಂದಿದ್ದರು. ನಂತರ ಹತ್ತು ವರ್ಷಗಳು ಕಳೆದ ನಂತರ ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿಯವರು ಬಜೆಟ್ ಬ್ಯಾಗಿಗೆ ಬದಲಾಗಿ ಕಡತವನ್ನು ಹೊತ್ತು ತಂದರು. 1970ರ ಹೊತ್ತಿಗೆ ಬ್ಯಾಗಿನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಯಿತು. ಗಟ್ಟಿ ಹೊದಿಕೆಯನ್ನು ಒಳಗೊಂಡ ಅಲ್ಯೂಮಿನಿಯಂ ಲೇಪಿತ ಸೂಟ್ ಕೇಸಿನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರಲಾಯಿತು. ಇಂತಹದ್ದರಲ್ಲಿಯೇ ಯಶವಂತರಾವ್ ಚವ್ಹಾಣ್ ಮತ್ತು ಇಂದಿರಾ ಗಾಂಧಿಯವರು ಬಜೆಟ್ ಬ್ಯಾಗನ್ನು ತಂದಿದ್ದು.
ನಂತರದ ಹಣಕಾಸು ಸಚಿವರು ವಿವಿದ ಸ್ಟೈಲ್ ಗಳನ್ನು ಬಜೆಟ್ ಸೂಟ್ ಕೇಸಿನಲ್ಲಿ ಅಳವಡಿಸಿಕೊಂಡರು. ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಎಂತಹ ಬಜೆಟ್ ಬ್ಯಾಗ್ ತರುತ್ತಾರೆ ಅನ್ನೋದು ಕುತೂಹಲ.
Advertisement