
ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸೋಮವಾರ 2016ನೇ ಸಾಲಿನ ಬಜೆಟ್ ನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ. ಹಲವು ಯೋಜನೆ, ಘೋಷಣೆಗಳನ್ನು ಪ್ರಕಟಿಸುತ್ತಾರೆ. ಆದರೆ ಕಳೆದ ವರ್ಷ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಹಲವು ಭರವಸೆಗಳು ಇನ್ನೂ ಈಡೇರಿಕೆಯಾಗಿಲ್ಲ. ಅವುಗಳಲ್ಲಿ ಕೆಲವು ಮುಖ್ಯವಾದವು ಇಲ್ಲಿವೆ.
1. ಸರಕು ಮತ್ತು ಸೇವಾ ತೆರಿಗೆ- ದೇಶದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ವ್ಯಾಪಾರ, ವಹಿವಾಟುಗಳನ್ನು ಹೆಚ್ಚಿಸಲು ಸರಕು ಮತ್ತು ಸೇವಾ ತೆರಿಗೆ ಅನುಕೂಲ ಮಾಡಿಕೊಡುತ್ತದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮೇಲೆ ವಿಧಿಸುವ ಪರೋಕ್ಷ ತೆರಿಗೆಗಳಾದ ಸುಂಕ ತೆರಿಗೆ, ಸೇವಾ ತೆರಿಗೆ, ಮೌಲ್ಯ ವರ್ಧಿತ ತೆರಿಗೆ ಮತ್ತು ಮಾರಾಟ ತೆರಿಗೆ ಇತ್ಯಾದಿಗಳಿಗೆ ಸರಕು ಮತ್ತು ಸೇವಾ ತೆರಿಗೆಯಡಿ ದೇಶಾದ್ಯಂತ ಒಂದೇ ತೆರಿಗೆ ವಿಧಿಸುವ ಅನುಕೂಲವಿರುತ್ತದೆ. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ. ಎನ್ ಡಿಎ ಸರ್ಕಾರ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಮಾತುಕತೆ ಹಂತದಲ್ಲಿದೆ.
2. ಅಟಲ್ ಇನ್ನೋವೇಶನ್ ಮಿಶನ್: ಕಳೆದ ವರ್ಷದ ಬಜೆಟ್ ನಲ್ಲಿ ಅಟಲ್ ಇನ್ನೋವೇಶನ್ ಯೋಜನೆಯನ್ನು ಘೋಷಿಸಲಾಗಿತ್ತು. ಕಳೆದ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಇದರ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ.
3. ಸಮಗ್ರ ದಿವಾಳಿತನ ಕೋಡ್: ಭಾರತ ದೇಶದಲ್ಲಿ ಸುಗಮ ವ್ಯಾಪಾರಕ್ಕೆ ಅನುಕೂಲವಾಗಲು ಸಮಗ್ರ ದಿವಾಳಿತನ ಕೋಡ್ ನ್ನು ಜಾರಿಗೆ ತರಲಾಗುವುದು ಎಂದು ಕಳೆದ ವರ್ಷ ವಿತ್ತ ಸಚಿವರು ಹೇಳಿದ್ದರು. ಕಳೆದ ಸಂಸತ್ತು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿತ್ತಾದರೂ ಅದಿನ್ನೂ ಜಾರಿಯಾಗಿಲ್ಲ.
4. ಬ್ಯಾಂಕ್ ಬೋರ್ಡ್ ಬ್ಯೂರೋ(ಬಿಬಿಬಿ): ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನಿರ್ದೇಶಕರ ನೇಮಕ ಮಾಡಲು ಮತ್ತು ಅವರಿಗೆ ನಿಧಿ ಸಂಗ್ರಹ ಕಾರ್ಯದಲ್ಲಿ ಹಾಗು ಬ್ಯಾಂಕ್ ಗಳ ವಿಲೀನ ಮತ್ತು ಸ್ವಾಧೀನ ಕಾರ್ಯಗಳಿಗೆ ನೆರವಾಗಲು, ಸ್ವಾಯತ್ತ ಬ್ಯಾಂಕ್ ಬೋರ್ಡ್ ಬ್ಯೂರೋ ಸ್ಥಾಪಿಸುವ ಪ್ರಸ್ತಾಪ ಸರ್ಕಾರದ ಮುಂದಿತ್ತು. ಮಂಡಳಿ ಮುಂದಿನ ಏಪ್ರಿಲ್ 1ರಿಂದ ಕಾರ್ಯಾರಂಭ ಮಾಡಲಿದೆ ಎಂದು ವಿತ್ತ ಸಚಿವರು ಹೇಳುತ್ತಿದ್ದಾರೆ.
5. ಸಾರ್ವಜನಿಕ ಸಾಲ ನಿರ್ವಹಣಾ ಸಂಸ್ಥೆ: ದೇಶೀಯ ಮತ್ತು ವಿದೇಶಿ ಸಾಲಗಳನ್ನು ಒಂದು ವ್ಯವಸ್ಥೆಯೊಳಗೆ ತರಲು ಸಾರ್ವಜನಿಕ ಸಾಲ ನಿರ್ವಹಣಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಪ್ರಸ್ತಾಪಿಸಿತ್ತು. ಆದರೆ ಇದನ್ನು ವಿರೋಧಿಸಿದ ಕೇಂದ್ರ ಬ್ಯಾಂಕ್ ಆರ್ ಬಿಐ, ಸಾಲ ನಿರ್ವಹಣೆಯಲ್ಲಿ ತನ್ನ ಪಾತ್ರವಿರಬೇಕು ಎಂದು ಅದು ಹೇಳುತ್ತಿದೆ. ಆದುದರಿಂದ ಸರ್ಕಾರದ ಉದ್ದೇಶಕ್ಕೆ ತೊಡಕುಂಟಾಗಿದ್ದು, ಸರ್ಕಾರ ರಿಸರ್ವ್ ಬ್ಯಾಂಕ್ ಜೊತೆ ಮಾತುಕತೆ ನಡೆಸುತ್ತಿದೆ.
6. ಭಾರತೀಯ ಹಣಕಾಸು ಕೋಡ್ : ಹಣಕಾಸು ವಲಯದ ಅನೇಕ ನಿಯಮಗಳನ್ನು ಸರಳಗೊಳಿಸಲು ಐಎಫ್ ಸಿಯನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದನ್ನು ಇನ್ನೂ ಸಂಸತ್ತಿನಲ್ಲಿ ಮಂಡಿಸಿಲ್ಲ.
7. ದೈಹಿಕ ಸಹಾಯಗಳು ಮತ್ತು ಜೀವನಕ್ಕೆ ನೆರವಾಗುವ ಸಾಧನಗಳು: ಬಡತನ ರೇಖೆಗಿಂತ ಕೆಳಗೆ ಇರುವ ಹಿರಿಯ ನಾಗರಿಕರಿಗೆ ಜೀವನ ನಡೆಸಲು ಅನುಕೂಲವಾಗುವ ಈ ಯೋಜನೆಯನ್ನು ಕಳೆದ ವರ್ಷ ಅರುಣ್ ಜೇಟ್ಲಿಯವರು ಬಜೆಟ್ ನಲ್ಲಿ ಘೋಷಿಸಿದ್ದರು. ಆದರೆ ಅದಿನ್ನೂ ಪ್ರಾರಂಭವಾಗಿಲ್ಲ.
8. ಐಎಸ್ ಎಂನ್ನು ಐಐಟಿಗೆ ಮೇಲ್ದರ್ಜೆಗೇರಿಸುವಿಕೆ: ಜಾರ್ಖಂಡ್ ನ ಧನ್ ಬಾದ್ ಜಿಲ್ಲೆಯಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ ನ್ನು ಮೇಲ್ದರ್ಜೆಗೇರಿಸಿ ಐಐಟಿಯಾಗಿ ಪರಿವರ್ತಿಸಲಾಗುವುದು ಎಂದು ಘೋಷಿಸಲಾಗಿತ್ತು. ಅದಕ್ಕೆ ಸಂಸತ್ತಿನಲ್ಲಿ ತಿದ್ದುಪಡಿ ತರಬೇಕಾಗಿದೆ. ಆದರೆ ಅದಕ್ಕೆ ಸಂಬಂಧಪಟ್ಟ ಮಸೂದೆಯನ್ನು ಇನ್ನೂ ಸಂಸತ್ತಿನಲ್ಲಿ ಮಂಡಿಸಿಲ್ಲ.
Advertisement