
ಕೋಲ್ಕತ್ತ: ೨೦೧೬-೨೦೧೭ ರ ಕೇಂದ್ರ ಬಜೆಟ್ ಭರವಸೆಯಿಲ್ಲದ ಮತ್ತು ಕ್ಲೀಶೆಯ ಕೆಟ್ಟ ಬಜೆಟ್ ಎಂದು ಸೋಮವಾರ ಬಣ್ಣಿಸಿರುವ ತೃಣಮೂಲ ಕಾಂಗ್ರೆಸ್, ನರೇಂದ್ರ ಮೋದಿ ಸರ್ಕಾರದ ಪಾರದರ್ಶಕತೆ ಮತ್ತು ವಿದೇಶಿ ನೇರ ಹೂಡಿಕೆ ನೀತಿಯನ್ನು ಪ್ರಶ್ನಿಸಿದೆ.
"ಈ ಬಜೆಟ್ ಗುಣಾತ್ಮಕ ಭರವಸೆಯನ್ನೂ ನೀಡುವುದೂ ಅಲ್ಲ ಅತ್ತ ಸೃಜನಶೀಲವೂ ಅಲ್ಲ. ಇದು ಮಾಮೂಲಿ ಕ್ಲೀಶೆಯ ಬಜೆಟ್. ಇದು ಭರವಸೆಯಿಲ್ಲದ ಕೆಟ್ಟ ಬಜೆಟ್ ಎಂದು ಕರೆಯದೆ ಇರಲು ಬೇರೆ ಮಾರ್ಗವಿಲ್ಲ" ಎಂದು ಪಶ್ಚಿಮ ಬಂಗಾಳದ ಆಡಳಿತ ವೆಬ್ ಸೈಟ್ ಹೇಳಿಕೆಯಲ್ಲಿ ತಿಳಿಸಿದೆ.
"ಉದ್ದಿಮೆಗಳಿಗಾಗಲೀ, ರೈತರಿಗಾಗಲಿ, ಬಡವರಿಗಗಲೀ, ಮಧ್ಯಮ ವರ್ಗದವರಿಗಾಗಲೀ ಅಥವಾ ಸೆನ್ಸೆಕ್ಸ್ ಗಾಗಲೀ ಯಾವುದೇ ಭರವಸೆ ನೀಡದ ಬಜೆಟ್" ಎಂದಿದೆ.
ಮೋದಿ ಸರ್ಕಾರದ ಎಫ್ ಡಿ ಐ ನೀತಿಯನ್ನು ಪ್ರಶ್ನಿಸಿರುವ ತೃಣಮೂಲ "ವಿತ್ತ ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಎಫ್ ಡಿ ಐ ನೀತಿಯ ಬದಲಾವಣೆಯ ವಿವರಗಳನ್ನು ತಿಳಿಸಲಿಲ್ಲವೇಕೆ? ಹಲವು ವಲಯಗಳಲ್ಲಿ ೧೦೦% ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡುವ ಇರಾದೆ ಇದೆಯೇ? ಈ ಸರ್ಕಾರಕ್ಕೆ ಪಾರದರ್ಶಕವಾಗಿ ಇರಲು ಸಾಧ್ಯವಿಲ್ಲವೇಕೆ?" ಎಂದು ಟಿ ಎಂ ಸಿ ಪ್ರಶ್ನಿಸಿದೆ.
"ಬಜೆಟ್ ನಲ್ಲಿ ಒಳ್ಳೆಯ ಬರಹ ಇದೆ. ಆದರೆ ಉದ್ಯೋಗ ಸೃಷ್ಟಿಯೆಲ್ಲಿ? ಪರಿಹಾರಗಳೆಲ್ಲಿ? ಉದ್ದಿಮೆಗೆ ಸಹಕಾರ ಏನಿದೆ? ಕೃಷಿಗೆ ಯಾವ ಸಹಾಯ ಇದೆ? ಹಸಿದ, ಉದ್ಯೋಗವಿಲ್ಲದ ಲಕ್ಷಾಂತರ ಯುವಕರಿದ್ದಾರೆ. ಉದ್ಯೋಗ ಸೃಷ್ಟಿಯ ಬಗ್ಗೆ ಮಾಹಿತಿಯೇ ಇಲ್ಲ" ಎಂದು ಕೂಡ ತೃಣಮೂಲ ಪಕ್ಷ ಆರೋಪಿಸಿದೆ.
ಮಧ್ಯಮ ವರ್ಗದವರಿಗೆ ತೆರಿಗೆಯಲ್ಲೂ ಯಾವುದೇ ಪರಿಣಾಮಕಾರಿ ಬದಲಾವಣೆಗಳಿಲ್ಲ ಎಂದಿರುವ ಪಕ್ಷ "ದೊಡ್ಡ ದೊಡ್ಡ ಮಾತುಗಳು, ಆದರೆ ದೊಡ್ಡ ಪರಿಹಾರಗಳಿಲ್ಲ" ಎಂದು ರೈಲ್ವೇ ಬಜೆಟ್ ಅನ್ನು 'ಜೀರೋ ಬಜೆಟ್' ಎಂದು ಬಣ್ಣಿಸಿದ್ದ ತೃಣಮೂಲ ಕಾಂಗ್ರೆಸ್ ಟೀಕಿಸಿದೆ.
Advertisement