ಬೆಂಗಳೂರು: ನಾನು ಅಭಿವೃದ್ಧಿ ಪರ ಹಾಗೂ ಜನಪರ ಬಜೆಟ್ ಮಂಡಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿಯಾಗಿ ಐದನೇ ಬಜೆಟ್ ಮಂಡಿಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಕಳೆದ ವರ್ಷಕ್ಕಿಂತ ಈ ಬಾರಿ 23,142 ಕೋಟಿ ರುಪಾಯಿ ಬಜೆಟ್ ಗಾತ್ರ ಹೆಜ್ಜಾಗಿದೆ. ಆದರೆ ಹಿಂದಿನ ಸರ್ಕಾರಗಳು ಖರ್ಚು ಮಾಡಿದ ಹಣ ಹಾಗೂ ನಾವು ಖರ್ಚು ಮಾಡಿದ ಹಣಕ್ಕೆ ತುಂಬಾ ವ್ಯತ್ಯಾಸ ಇದೆ. ಬೇಕಿದ್ದರೆ ಈ ಬಗ್ಗೆ ನಾನು ಅಂಕಿ ಅಂಶಗಳನ್ನು ನೀಡಲು ಸಿದ್ಧ ಎಂದಿದ್ದಾರೆ.
ನಾವು ನೀರಾವರಿಗೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ರುಪಾಯಿ ಖರ್ಚು ಮಾಡುವುದಾಗಿ ಹೇಳಿದ್ದೇವೆ. ಆದರೆ 54 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದ್ದೇವೆ. ಬಿಜೆಪಿ ಅವಧಿಯಲ್ಲಿ ಕೇವಲ 21 ಸಾವಿರ ಕೋಟಿ ಖರ್ಚು ಮಾಡಲಾಗಿತ್ತು. ಇನ್ನು ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಬಿಜೆಪಿಯವರು ಅದಕ್ಕಾಗಿ ಕೇವಲ 7 ಸಾವಿರ ಕೋಟಿ ಖರ್ಚು ಮಾಡಿದ್ದರು. ಆದರೆ ನಾವು ಕೃಷಿಗಾಗಿ 19 ಸಾವಿರ ಕೋಟಿ ವೆಚ್ಚ ಮಾಡಿದ್ದೇವೆ ಎಂದರು.
ಈ ಬಜೆಟ್ ನಲ್ಲಿ ಕೃಷಿ, ಶಿಕ್ಷಣ, ನೀರಾವರಿ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಚ್ಚು ಆದ್ಯತೆ ನೀಡಿದ್ದು, ಇತರೆ ಇಲಾಖೆಗಳ ಆದ್ಯತೆಗಳು ಮುಂದುವರೆದಿವೆ ಎಂದು ಸಿಎಂ ತಿಳಿಸಿದರು.
ಇದೇ ವೇಳೆ ರೈತರ ಸಾಲ ಮನ್ನಾ ಮಾಡಿಲ್ಲ. ಇದು ರೈತ ವಿರೋಧಿ ಬಜೆಟ್ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಕೇಂದ್ರ ಸರ್ಕಾರ ಮೊದಲು ರೈತರ ಶೇ.50ರಷ್ಟು ಸಾಲ ಮನ್ನಾ ಮಾಡಲಿ. ನಾವು ಅರ್ಧದಷ್ಟು ಸಾಲ ಮನ್ನಾ ಮಾಡುತ್ತೇವೆ ಎಂದರು.
ಬಿಜೆಪಿಯವರು ಸಾಲ ಮನ್ನಾಗೆ ಒತ್ತಾಯಿಸಿ ನಮ್ಮ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡುವು ಬದಲು ಸಂಸತ್ತಿನಲ್ಲಿ ಪ್ರತಿಭಟನೆ ಮಾಡಲಿ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದರೆ ಶೇ.80ರಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದರು.