ಬಡಜನ ವಿರೋಧಿ, ರೈತ ವಿರೋಧಿ ಬಜೆಟ್: ಶರದ್ ಯಾದವ್

ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಅನ್ನು ಟೀಕಿಸಿರುವ ಜನತಾ ದಳ ಸಂಯುಕ್ತ ಪಕ್ಷದ ಹಿರಿಯ ನಾಯಕ ಶರದ್ ಯಾದವ್, 'ಬಡಜನ ವಿರೋಧಿ, ರೈತ ವಿರೋಧಿ ಬಜೆಟ್'
ಜನತಾ ದಳ ಸಂಯುಕ್ತ ಪಕ್ಷದ ಹಿರಿಯ ನಾಯಕ ಶರದ್ ಯಾದವ್
ಜನತಾ ದಳ ಸಂಯುಕ್ತ ಪಕ್ಷದ ಹಿರಿಯ ನಾಯಕ ಶರದ್ ಯಾದವ್
ನವದೆಹಲಿ: ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಅನ್ನು ಟೀಕಿಸಿರುವ ಜನತಾ ದಳ ಸಂಯುಕ್ತ ಪಕ್ಷದ ಹಿರಿಯ ನಾಯಕ ಶರದ್ ಯಾದವ್, 'ಬಡಜನ ವಿರೋಧಿ, ರೈತ ವಿರೋಧಿ ಬಜೆಟ್' ಎಂದಿದ್ದಾರೆ. 
"ಈ ಬಜೆಟ್ ರೈತರ ಬಗ್ಗೆಯಾಗಲಿ, ನಿರುದ್ಯೋಗ ಯುವಕರ ಬಗ್ಗೆಯಾಗಲಿ ಮತ್ತು ಇನ್ನು ಪ್ರಮುಖವಾಗಿ ಸರ್ಕಾರದ ನೋಟು ಹಿಂಪಡೆತ ನೀತಿಯ ಬಗ್ಗೆಯಾಗಲಿ ಮಾತನಾಡಿಲ್ಲ" ಎಂದು ಅವರು ದೂರಿದ್ದಾರೆ. 
"ಬಜೆಟ್ ನಲ್ಲಿ ರೈತರಿಗೆ ಏನೂ ಇಲ್ಲ. ಹಾಗೆಯೇ, ಇದು ಯುವಕರಿಗೆ ಉದ್ಯೋಗ ಸೃಷ್ಟಿಯ ಬಗ್ಗೆಯೂ ಏನು ಮಾತನಾಡುವುದಿಲ್ಲ" ಎಂದು ಯಾದವ್ ಹೇಳಿದ್ದು ಇದಕ್ಕೂ ಮುಂಚಿತವಾಗಿ ಬಿಜೆಪಿ ಯುವಕರಿಗೆ ೨ ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿತ್ತು ಎಂದಿದ್ದಾರೆ. 
"ಆ ಉದ್ಯೋಗಗಳು ಈಗೆಲ್ಲಿ?" ಎಂದು ಕೂಡ ಅವರು ಪ್ರಶ್ನಿಸಿದ್ದಾರೆ. 
ರೈಲ್ವೆ ಮತ್ತು ಹಣಕಾಸು ಬಜೆಟ್ ಗಳನ್ನು ವಿಲೀನಗೊಳಿಸಿರುವುದನ್ನು ಕೂಡ ಯಾದವ್ ಟೀಕಿಸಿದ್ದು ಇದು ಅನಗತ್ಯ ಪ್ರಕ್ರಿಯೆ ಎಂದಿದ್ದಾರೆ. 
"ಇವೆರಡನ್ನೂ ವಿಲೀನಗೊಳಿಸುವ ಅಗತ್ಯವೇನಿತ್ತು? ಕೇವಲ ಒಂದೂ ವರೆ ಪುಟದಲ್ಲಿ ರೈಲ್ವೆ ಯೋಜನೆಗಳನ್ನು ಮುಗಿಸಿದ್ದಾರೆ" ಎಂದು ಅವರು ಹೇಳಿದ್ದಾರೆ. 
ಬಜೆಟ್ ನಲ್ಲಿ ಸರ್ಕಾರ ಸಣ್ಣ ಉದ್ದಿಮೆಗಳು ಮತ್ತು ರೈತರ ಬಗ್ಗೆ ಮಾತನಾಡಬೇಕಿತ್ತು ಎಂದಿರುವ ಅವರು ನೋಟು ಹಿಂಪಡೆತದ ನಂತರ ಅತಿ ಹೆಚ್ಚು ತೊಂದರೆಗೆ ಒಳಗಾದ ವಲಯಗಳಿವು ಎಂದು ಕೂಡ ಯಾದವ್ ಹೇಳಿದ್ದಾರೆ. 
ನೋಟು ಹಿಂಪಡೆತ ನಂತರ ಎಷ್ಟು ಕಪ್ಪು ಹಣ ಮತ್ತು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕಿತ್ತು ಎಂದು ಕೂಡ ಶರದ್ ಯಾದವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com