ಮೇಕೆದಾಟು ಯೋಜನೆ: ಸಂಸತ್ತಿನಲ್ಲಿ ಹೋರಾಟ ನಡೆಸಲು ರಾಜ್ಯದ ಸಂಸದರ ನಿರ್ಣಯ

ರಾಜ್ಯಸರ್ಕಾರ ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡಿನ ಧೋರಣೆ ವಿರುದ್ಧ ರಾಜ್ಯದ...
ರಾಜ್ಯ ಸಂಸದರ ಸಭೆ
ರಾಜ್ಯ ಸಂಸದರ ಸಭೆ

ನವದೆಹಲಿ: ರಾಜ್ಯಸರ್ಕಾರ ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆಗೆ  ಅಡ್ಡಗಾಲು ಹಾಕುತ್ತಿರುವ ತಮಿಳುನಾಡಿನ ಧೋರಣೆ ವಿರುದ್ಧ ರಾಜ್ಯದ ಸರ್ವ ಪಕ್ಷಗಳ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸತ್ತಿನ ಒಳಗೆ ಹಾಗೂ ಹೊರಗೆ ಒಕ್ಕೊರಲಿನ  ಹೋರಾಟ ನಡೆಸಲು ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ.

ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಅವರ ದೆಹಲಿ ನಿವಾಸದಲ್ಲಿಂದು ನಡೆದ ಸರ್ವ ಪಕ್ಷಗಳ ಸಂಸದರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

 ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡ,  ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ  ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ನಂತರ ಮಾತನಾಡಿದ ಸದಾನಂದಗೌಡ, ರಾಜ್ಯದ ಜಲ, ನೆಲ, ಭಾಷೆ,  ವಿಚಾರ ಬಂದಾಗ ಪಕ್ಷ ಬೇಧ ಮರೆತು ಹೋರಾಟ ಮಾಡುತ್ತಾ ಬಂದಿದ್ದು,  ಮೇಕೆದಾಟು ಯೋಜನೆ ವಿಚಾರದಲ್ಲೂ ಒಕ್ಕೊರಲಿನ ಹೋರಾಟ ಮುಂದುವರೆಸಲು ಪಕ್ಷಬೇಧ ಮರೆತು ಸಂಸದರೆಲ್ಲ ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಅನಗತ್ಯವಾಗಿ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿದೆ. ಎಐಎಡಿಎಂಕೆ ಹಾಗೂ ಡಿಎಂಕೆ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಕಳೆದು ಏಳೆಂಟು ದಿನಗಳಿಂದ ಈ ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ತಮಿಳುನಾಡು ಸಂಸದರ ಈ ಧೋರಣೆ ವಿರುದ್ಧ ನಾವೂ ಸಹ ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಮಹಾದಾಯಿ ನದಿ ನೀರು ವಿವಾದ ಕುರಿತಂತೆ ಮುಂದೆ ಕೈಗೊಳ್ಳಬೇಕಾದ ಹೋರಾಟದ ರೂಪು -ರೇಷೆ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com