
ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇಂದು ವಿಧಾನಸಭೆಯಲ್ಲಿ ಮಂಡಿಸಲಿರುವ ಬಹು ನಿರೀಕ್ಷಿತ ಬಜೆಟ್ ನಲ್ಲಿ ಕಳೆದ ಬಾರಿ ಸಿದ್ದರಾಮಯ್ಯನವರು ಘೋಷಿಸಿದ್ದ ಯೋಜನೆಗಳ ಪೈಕಿ ಶೇಕಡಾ 80ರಷ್ಟನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಾಗಿರುವ ಆರೋಗ್ಯ ಭಾಗ್ಯ. ಸ್ನಾತಕೋತ್ತರ ಪದವಿಯವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಯೋಜನೆಗಳು ಇಂದು ಕುಮಾರಸ್ವಾಮಿಯವರು ಮಂಡಿಸುತ್ತಿರುವ ಬಜೆಟ್ ನಲ್ಲಿ ಕೂಡ ಮುಂದುವರಿಯಲಿದೆ ಎಂದು ಮೂಲಗಳು ಹೇಳುತ್ತವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಬಗ್ಗೆ ಸಮಾನ ಹಿತಾಸಕ್ತಿಗಳನ್ನು ಬಯಸಿದೆ ಎನ್ನುತ್ತಾರೆ ರಾಯಚೂರು ವಿಶ್ವವಿದ್ಯಾಲಯದ ಪ್ರೊ ಮುಜಾಫರ್ ಅಸ್ಸದಿ.
ತನ್ನ ಮೂಲವನ್ನು ಕ್ರೋಢೀಕರಿಸಲು ಕಾಂಗ್ರೆಸ್ ಯತ್ನಿಸುತ್ತಿದ್ದರೆ ತನ್ನ ಮೂಲವನ್ನು ವಿಸ್ತರಿಸಲು ಜೆಡಿಎಸ್ ಯತ್ನಿಸುತ್ತಿದೆ. ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಕೈಬಿಟ್ಟು ದಲಿತ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಲು ಎರಡೂ ಪಕ್ಷಗಳಿಗೆ ಇಚ್ಛೆಯಿಲ್ಲ ಎನ್ನುತ್ತಾರೆ ಪ್ರೊ ಅಸ್ಸದಿ.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಕೈಬಿಟ್ಟರೆ ಪೂರಕ ಬಜೆಟ್ ನಲ್ಲಿ ಕಾಂಗ್ರೆಸ್ ಅದನ್ನು ಪ್ರಸ್ತಾಪ ಮಾಡುವ ಸಾಧ್ಯತೆಯಿದೆ ಎಂದು ವಿಧಾನಪರಿಷತ್ ನ ಮುಖ್ಯ ಸಚೇತಕ ಹಾಗೂ ಸಿದ್ದರಾಮಯ್ಯನವರ ಸಹಚರ ಐವಾನ್ ಡಿಸೋಜ ಹೇಳುತ್ತಾರೆ. ಚುನಾವಣೆಗೆ ಮುನ್ನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮೊದಲು ಸಿದ್ದರಾಮಯ್ಯನವರು ಲೆಕ್ಕಪತ್ರ ಮಂಡಿಸಬೇಕಾಗಿತ್ತು ಎನ್ನುತ್ತಾರೆ ಅಹಿಂದ ನಾಯಕ ಲೋಲಾಕ್ಷ.
Advertisement