ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ಬಜೆಟ್ 2018: ಗ್ರಾಮೀಣ ಭಾರತೀಯರ ಅನುಕೂಲಕ್ಕೆ 5 ಲಕ್ಷ ವೈಫೈ ಸಂಪರ್ಕ ವ್ಯವಸ್ಥೆ

ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ದೇಶದ ರೈತರು, ಮೂಲಸೌಕರ್ಯಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿಗೆ ...
ನವದೆಹಲಿ: ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ದೇಶದ ರೈತರು, ಮೂಲಸೌಕರ್ಯಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ  16730 ಕೋಟಿ ರೂ ವೆಚ್ಚದಲ್ಲಿ 2 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಗ್ರಾಮೀಣ ಜನರ ಜೀವನ ಸುಧಾರಣೆಗೆ 14.3 ಲಕ್ಷ ಕೋಟಿ ರೂಪಾಯಿ ವ್ಯಯಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.
ಬಯಲು ಶೌಚಾಲಯ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಮೂಲಭೂತ ಸೌಕರ್ಯ, ಆರೋಗ್ಯದ ಕಾಳಜಿ ಮೂಡಿಸುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ 2 ಕೋಟಿ ಶೌಚಾಲಯವನ್ನು ನಿರ್ಮಿಸಿಕೊಡುವ ಉದ್ದೇಶ ಹೊಂದಲಾಗಿದೆ. ಪ್ರಧಾನ ಮಂತ್ರಿಯವರ ಸ್ವಚ್ಛಭಾರತ ಅಭಿಯಾನ ಉತ್ತಮ ರೀತಿಯಲ್ಲಿ ಸಾಗುತ್ತಿದೆ, ದೇಶಾದ್ಯಂತ ಈಗಾಗಲೇ 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಗ್ರಾಮೀಣ ಭಾಗಗಳ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತೇಜನ ನೀಡುವ ಸಲುವಾಗಿ ರೈತರ ಬೆಳೆಗಳಿಗೆ ಹೆಚ್ಚಿನ ಕನಿಷ್ಟ ಬೆಂಬಲ ಬೆಲೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಜೇಟ್ಲಿ ಘೋಷಿಸಿದರು.
ಕೇಂದ್ರ ಸರ್ಕಾರದ ಸುಲಭವಾಗಿ ಉದ್ಯಮ ಮಾಡುವ ಪರಿಕಲ್ಪನೆಯಿಂದ ಬಡವರು ಸುಲಭವಾಗಿ ಜೀವನ ಸಾಗಿಸುವ ಪರಿಕಲ್ಪನೆಗೆ ಸರ್ಕಾರ ಮುಂದಿನ ದಿನಗಳಲ್ಲಿ ಒತ್ತು ನೀಡಲಿದೆ. ಆಪರೇಶನ್ ಫ್ಲಡ್ ರೀತಿಯಲ್ಲಿ ಆಪರೇಶನ್ ಗ್ರೀನ್ ಆರಂಭಿಸಲಾಗುವುದು. ಇದಕ್ಕಾಗಿ ಸುಮಾರು 500 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುವುದು. ರೈತರ ಉತ್ಪನ್ನಗಳನ್ನು ಹೆಚ್ಚಿಸಲು ಇದು ಸಹಾಯವಾಗಲಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಲೈವ್ ಸ್ಟಾಕ್ ಫಾರ್ಮರ್ಸ್(ಹಸು, ಕುರಿ, ಮೇಕೆ, ಹಂದಿ ಇತ್ಯಾದಿಗಳನ್ನು ಸಾಕುವ ಗ್ರಾಮೀಣ ಪ್ರದೇಶದವರು)ಗೆ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ರೈತ ಸಂಘಗಳಿಗೆ ಪ್ರಯೋಜನವಾಗುವ ರೀತಿಯ ತೆರಿಗೆ ವ್ಯವಸ್ಥೆಯನ್ನು ತರಲಾಗುವುದು ಎಂದು ಹೇಳಿದರು.
ಗ್ರಾಮೀಣ ಭಾಗದ ಜನತೆಗೆ ಸುಲಭವಾಗಿ ಇಂಟರ್ನೆಟ್ ಸೌಕರ್ಯ ದೊರಕಲು ದೇಶದ 5 ಕೋಟಿ ಗ್ರಾಮೀಣ ಭಾರತೀಯರಿಗೆ 5 ಲಕ್ಷ ವೈಫೈ ವ್ಯವಸ್ಥೆಗಳನ್ನು ದೊರಕಿಸಿಕೊಡಲಾಗುವುದು ಎಂದು ಬಜೆಟ್ ನಲ್ಲಿ ಜೇಟ್ಲಿ ಘೋಷಿಸಿದರು.
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ 8 ಕೋಟಿ ಉಚಿತ ಗ್ಯಾಸ್ ಸಂಪರ್ಕ, ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ಬಡವರಿಗೆ 4 ಕೋಟಿ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಗುವುದು 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಹೈ ಸ್ಪೀಡ್ ಇಂಟರ್ ನೆಟ್ ಸಂಪರ್ಕ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅರುಣ್ ಜೇಟ್ಲಿ ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com