ಬಿಎಸ್ ಯಡಿಯೂರಪ್ಪ
ಕರ್ನಾಟಕ ಬಜೆಟ್
ಇದೊಂದು ಡೋಂಗಿ ಬಜೆಟ್, ರೇವಣ್ಣ ಪ್ರಭಾವ ಗಾಢವಾಗಿದೆ: ಬಿಎಸ್ ವೈ ಟೀಕೆ
ಬಹುಮತ ಇಲ್ಲದ ಸಮ್ಮಿಶ್ರ ಸರ್ಕಾರ ಮುಂಗಡಪತ್ರ ಮಂಡಿಸಿದ್ದು ಸರಿಯಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಕ್ರಾಂತಿಕಾರಿ ಬಜೆಟ್ ನೀಡುವ ನಿರೀಕ್ಷೆ ಸಂಪೂರ್ಣ....
ಬೆಂಗಳೂರು: ಬಹುಮತ ಇಲ್ಲದ ಸಮ್ಮಿಶ್ರ ಸರ್ಕಾರ ಮುಂಗಡಪತ್ರ ಮಂಡಿಸಿದ್ದು ಸರಿಯಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಕ್ರಾಂತಿಕಾರಿ ಬಜೆಟ್ ನೀಡುವ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಇದೊಂದು ಡೋಂಗಿ ಬಜೆಟ್ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಅವರು, ಕಳೆದ ಏಳೆಂಟು ತಿಂಗಳಿಂದ ಕ್ರಾಂತಿಕಾರಿ ಬಜೆಟ್ ಮಂಡಿಸುತ್ತಾರೆ ಎಂಬ ನಿರೀಕ್ಷೆ ಸಾಕಾರಗೊಂಡಿಲ್ಲ. ಆಯವ್ಯಯದಲ್ಲಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯನ್ನು ಮರೆತಿಲ್ಲ. ತಮ್ಮ ಸಹೋದರ ರೇವಣ್ಣ ಅವರ ತವರು ಜಿಲ್ಲೆ ಹಾಸನ ಅಭಿವೃದ್ಧಿಯೇ ಅವರ ಪರಮ ಗುರಿಯಾಗಿದೆ. ಬಜೆಟ್ ಮೇಲೆ ಸಚಿವ ರೇವಣ್ಣ ಅವರ ಪ್ರಭಾವ ಗಾಢವಾಗಿದೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಬಜೆಟ್ ಮಂಡಿಸಿದ್ದು, ಕಳೆದ ಆಯವ್ಯಯದಲ್ಲಿನ ಶೇ.35. ರಷ್ಟು ಹಣವನ್ನೂ ಕೂಡ ಖರ್ಚು ಮಾಡಿಲ್ಲ. ರೈತರ ಸಾಲಮನ್ನಕ್ಕಾಗಿ 45 ಸಾವಿರ ಕೋಟಿ ರೂ ಹಣವನ್ನು ಒಂದೇ ಕಂತಿನಲ್ಲಿ ನೀಡುವುದಾಗಿ ನೀಡಿದ ಭರವಸೆಯಂತೆ ಅವರು ನಡೆದುಕೊಂಡಿಲ್ಲ. ನೀರಾವರಿ, ಪರಿಶಿಷ್ಟ ಜಾತಿ, ವರ್ಗ ಮತ್ತಿತರ ಇಲಾಖೆಗಳಲ್ಲಿಯೂ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಆಪಾದಿಸಿದರು.
ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಸುಳ್ಳು ಹೇಳಿ ವಂಚನೆ ಮಾಡಿದ್ದಾರೆ. ಹೀಗಾಗಿ ಮುಂಗಡಪತ್ರವನ್ನು ಖಂಡಿಸುತ್ತಿದ್ದು, ಸೋಮವಾರದಿಂದ ಎರಡೂ ಸದನಗಳಲ್ಲಿ ಬಜೆಟ್ ವಿರುದ್ಧ ಹೋರಾಟ ನಡೆಸುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

