ಕರ್ನಾಟಕ ಬಜೆಟ್ 2019: 4 ವರ್ಷಗಳಲ್ಲಿ ಹೋಬಳಿ ಮಟ್ಟದಲ್ಲಿ 1 ಸಾವಿರ ಪಬ್ಲಿಕ್ ಶಾಲೆಗಳ ಸ್ಥಾಪನೆ

ಮುಂದಿನ ನಾಲ್ಕು ವರ್ಷಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಒಟ್ಟು 1 ಸಾವಿರ ರಾಜ್ಯ ಪಬ್ಲಿಕ್ ಶಾಲೆಗಳ ಸ್ಥಾಪನೆ, ಎಸ್ಎಸ್ಎಲ್ ಸಿ ಮೌಲ್ಯಮಾಪನ ಕೇಂದ್ರಗಳ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಮುಂದಿನ ನಾಲ್ಕು ವರ್ಷಗಳಲ್ಲಿ ಹೋಬಳಿ ಕೇಂದ್ರಗಳಲ್ಲಿ ಒಟ್ಟು 1 ಸಾವಿರ ರಾಜ್ಯ ಪಬ್ಲಿಕ್ ಶಾಲೆಗಳ ಸ್ಥಾಪನೆ, ಎಸ್ಎಸ್ಎಲ್ ಸಿ ಮೌಲ್ಯಮಾಪನ ಕೇಂದ್ರಗಳ ಡಿಜಿಟಲೀಕರಣ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಲು ಅನುದಾನ ಘೋಷಣೆ ಸೇರಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಯೋಜನೆಗಳನ್ನು ಸರ್ಕಾರ ಇಂದು ಮಂಡಿಸಿದ ಆಯವ್ಯಯದಲ್ಲಿ ಘೋಷಿಸಿದೆ. 
ಮುಂದಿನ 4 ವರ್ಷದಲ್ಲಿ ಹೋಬಳಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿ ವರೆಗೆ ಒಂದೇ ಸೂರಿನಡಿ ಶಿಕ್ಷಣ ಒದಗಿಸುವ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಿ,  ಕೇಂದ್ರೀಯ ವಿದ್ಯಾಲಯ ಮಾದರಿಯ ಪ್ರತ್ಯೇಕ ಸಂಘಟನೆ ಹಾಗೂ ಮಾರ್ಗಸೂಚಿ ನಿಗದಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಇಂದು ಘೋಷಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯ ಪರಿಣಾಮಕಾರಿ ಜಾರಿ ಹಾಗೂ ಶಾಲಾ ಆಡಳಿತದ ಮೇಲೆ ನಿಗಾ ವಹಿಸಲು ಆರ್ ಟಿಇ ಕಾಯ್ದೆಯಡಿ ರಚಿಸಲಾಗಿರುವ ಮೇಲುಸ್ತುವಾರಿ ಸಮಿತಿಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಾಗಿದೆ. ಈ ವ್ಯಾಪ್ತಿಗೆ ಬರುವ ಪ್ರತಿ ಶಾಲೆಗಳ ರಿಪೋರ್ಟ್ ಕಾರ್ಡ್ ತಯಾರಿಸಿ ಅದನ್ನು ಶಿಕ್ಷಕ-ಪಾಲಕರ ಸಭೆಯಲ್ಲಿ ಚರ್ಚಿಸಿ ಶಾಲೆಗಳ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಆಧುನೀಕರಣಕ್ಕೆ ಕ್ರಮ, 1,500 ನೂತನ ಶಾಲಾ ಕೊಠಡಿ ನಿರ್ಮಾಣ, 5000 ಶಾಲಾ ಕೊಠಡಿಗಳ ಉನ್ನತೀಕರಣ,  ಒಂದು ಸಾವಿರ ಶಾಲೆಗಳಿಗೆ ಕಲಿಕಾ  ಉಪಕರಣ ವಿತರಣೆ,  ಶಾಲಾ ಕಟ್ಟಡಗಳ ನಿರ್ವಹಣೆಗೆ ಎಸ್ಟೇಟ್ ಅಧಿಕಾರಿ ನೇಮಕ,  ‘ಗುರುಚೇತನ’ ಕಾರ್ಯಕ್ರಮದಡಿ 1 ಲಕ್ಷ ಶಿಕ್ಷಕರಿಗೆ  10 ದಿನಗಳ ತರಬೇತಿ, ಕಲಿಕೆಯ ಫಲಿತಾಂಶ ಸುಧಾರಣೆಗೆ ಆದ್ಯತೆ,  ಟೀಚರ್- ಮೆಂಟರ್ ಕಾರ್ಯಕ್ರಮದ ಮುಖಾಂತರ ಶಿಕ್ಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ಜೊತೆಗೆ, ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಎಚ್ಚರವಹಿಸಲು ಅವರ ಮೇಲೆ ವೈಯಕ್ತಿಕ ಗಮನ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. 
ಕೌಶಲ್ಯ ತರಬೇತಿ ಕೇಂದ್ರ
 ಸರ್ಕಾರಿ ಶಾಲಾ ಶಿಕ್ಷಕರಿಗೆ ಭಾಷಾ ವಿಷಯಗಳಲ್ಲಿ ನಿರಂತರ  ತರಬೇತಿ ನೀಡಲು 2 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಆಲೂರು ವೆಂಕಟರಾವ್ ಅವರ ಹೆಸರಿನಲ್ಲಿ ಸುಸಜ್ಜಿತ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು. ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಹಾಗೂ ಆರೋಗ್ಯಕರ ಸ್ಪರ್ಧೆಗೆ ವಿಶೇಷ ತರಬೇತಿ ಮತ್ತು  ಮಾರ್ಗದರ್ಶನ ನೀಡಿ ಸಜ್ಜುಗೊಳಿಸಲು “ಸ್ಪರ್ಧಾ ಕಲಿ” ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಪ್ರತಿ  ಜಿಲ್ಲೆಯ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1.5 ಕೋಟಿ ರೂ. ಹಾಗೂ  ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯದಲ್ಲಿ ವೃತ್ತಿ ಶಿಕ್ಷಣದ ತರಬೇತಿ ನೀಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com