ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್
ಮಂಗಳವಾರ ಕೃಷಿಕ ಗುಂಪಿನೊಂದಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಮಾಲೋಚನೆ
ಮಹಾರಾಷ್ಟ್ರದಂತಹ ಕೆಲ ರಾಜ್ಯಗಳಲ್ಲಿ ಮುಂಗಾರು ವಿಳಂಬವಾಗಿದ್ದು, ಬರ ಪರಿಸ್ಥಿತಿ ತೀವ್ರಗೊಂಡಿರುವ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೃಷಿಕ ಗುಂಪು ಹಾಗೂ ಕೃಷಿ ತಜ್ಞರೊಂದಿಗೆ ಮೊದಲ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಿದ್ದಾರೆ.
ನವದೆಹಲಿ: ಮಹಾರಾಷ್ಟ್ರದಂತಹ ಕೆಲ ರಾಜ್ಯಗಳಲ್ಲಿ ಮುಂಗಾರು ವಿಳಂಬವಾಗಿದ್ದು, ಬರ ಪರಿಸ್ಥಿತಿ ತೀವ್ರಗೊಂಡಿರುವ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೃಷಿಕ ಗುಂಪು ಹಾಗೂ ಕೃಷಿ ತಜ್ಞರೊಂದಿಗೆ ಮೊದಲ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ಕಳೆದ ತಿಂಗಳ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿರ್ಮಲಾ ಸೀತಾರಾಮನ್ ನಡೆಸುತ್ತಿರುವ ಮೊದಲ ಸಂವಾದ ಇದಾಗಿದೆ. ಸೀತಾರಾಮನ್ ಜುಲೈ 5 ರಂದು ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ.
ರೈತರ ಆದಾಯ ದ್ವಿಗುಣ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಮಾರ್ಗೋಪಾಯಗಳ ಕುರಿತಂತೆ ಕೃಷಿ ತಜ್ಞರು ಹಾಗೂ ವಿವಿಧ ಕೃಷಿ ಸಂಘಟನೆಗಳಿಂದ ಮಾಹಿತಿಯನ್ನು ಸಚಿವರು ಪಡೆಯಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಮೀನುಗಾರಿಕೆ, ಕುಕ್ಕುಟ ಉದ್ಯಮ ಹಾಗೂ ಪಶುಪಾಲನೆ ಮತ್ತಿತರ ಕೃಷಿ ಚಟುವಟಿಕೆಗಳ ಪ್ರಗತಿ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಪ್ರತ್ಯೇಕ ಮೀನುಗಾರಿಕಾ ಇಲಾಖೆಯನ್ನು ಸೃಷ್ಟಿಸುವುದಲ್ಲದೇ, ಕೃಷಿ ಸಂಬಂಧಿತ ವಲಯದ ಉತ್ತೇಜನಕ್ಕಾಗಿ ಕ್ಯಾಬಿನೇಟ್ ಸಚಿವರನ್ನು ನೇಮಕಗೊಳಿಸುವ ಸಾಧ್ಯತೆ ಇದೆ.
ವಿವಿಧ ಬೇಡಿಕೆಗಳನ್ನು ಪಟ್ಟಿಮಾಡಿ ಅನೇಕ ಕೃಷಿಕ ಗುಂಪುಗಳು ಈಗಾಗಲೇ ಹಣಕಾಸು ಇಲಾಖೆಗೆ ಸಲ್ಲಿಸಿವೆ. ನಂತರ ನಿರ್ಮಲಾ ಸೀತಾರಾಮನ್, ಉದ್ಯಮಕ್ಕೆ ಸಂಬಂಧಿಸಿದ ಪ್ರಮುಖ ಗುಂಪಿನೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ