ರಾಜ್ಯ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ ಬಂಪರ್; 33,700 ಕೋಟಿ ಘೋಷಣೆ; ರೈತರಿಗೆ ಏನೆಲ್ಲಾ ಸಿಗಲಿದೆ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು 2022-23ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 33,700 ಕೋಟಿ ರುಪಾಯಿ ಸಿಕ್ಕಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಅನುಗುಣವಾಗಿ ಆದಾಯವೂ ಹೆಚ್ಚಾಗಬೇಕು. ರೈತರ ಆದಾಯ ದ್ವಿಗುಣಗೊಳಿಸುವ ಸಂಬಂಧ ರಾಜ್ಯ ಸರ್ಕಾರ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿನ ಬಜೆಟ್ ಮಂಡನೆ ವೇಳೆ ಹೇಳಿದರು.

ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೃಷಿಯನ್ನು ಲಾಭದಾಯಕ ಮಾಡುವ ನಿಟ್ಟಿನಲ್ಲಿ ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್, ನೀರಾವರಿ ಸೌಲಭ್ಯ, ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ, ಕೃಷಿ ಯಂತ್ರೋಪಕರಣಕ್ಕೆ ಸಹಾಯಧನ, ಪಿಎಂ ಕಿಸಾನ್ ಸಹಾಯಧನ ಹೀಗೆ ಹಲವಾರು ಸೌಲಭ್ಯಗಳನ್ನು ವಿವಿಧ ಯೋಜನೆಗಳಡಿಯಲ್ಲಿ ಒದಗಿಸಲಾಗುತ್ತಿದೆ. ಈ ಎಲ್ಲ ಕ್ರಮಗಳು ಆತ್ಮ ನಿರ್ಭರ್ ಕಟ್ಟುವ ಆಶಯಕ್ಕೆ ಪೂರಕವಾಗಿದೆ.

ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಕೃಷಿ ಯಂತ್ರೀಕರಣ ಬಹಳ ಮುಖ್ಯವಾಗಿದೆ. ರೈತರ ಯಂತ್ರೋಪಕರಣ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ 5 ಎಕರೆಗೆ ಡಿಬಿಟಿ ಮುಖಾಂತರ ಡೀಸೆಲ್ ಸಹಾಯಧನ ನೀಡಲು ರೈತ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದಕ್ಕೆ 500 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಮೀಸಲು ಇರಿಸಿದೆ.

ಹೋಬಳಿ ಮಟ್ಟಕ್ಕೆ ಕೃಷಿ ಯಂತ್ರ ಕೇಂದ್ರಗಳು
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ 50 ಲಕ್ಷ ಹೆಚ್ಚು ರೈತರಿಗೆ 21-22ನೇ ಸಾಲಿನ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1,798 ಕೋಟಿ ರೂ.ಗಳ ಅನುದಾನವನ್ನು ನೇರ ನಗದು ವರ್ಗಾಯಿಸಲಾಗಿದೆ. ಈ ಯೋಜನೆ ಪ್ರಸ್ತುತ ಸಾಲಿನಲ್ಲಿ ಮುಂದುವರಿಸಲಾಗುವುದು. ರಾಜ್ಯದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣ ಕೈಗೆಟಕುವಂತೆ ಮಾಡಲು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಈಗಾಗಲೇ ಸ್ಥಾಪಿಸಿರುವ ಕೃಷಿ ಯಂತ್ರ ಕೇಂದ್ರಗಳು ರಾಜ್ಯದ ಎಲ್ಲ ಹೋಬಳಿಗೂ ವಿಸ್ತರಿಸಲಾಗುವುದು.

ತೊಗರಿಗೆ ಭೀಮಾ ಪಲ್ಸ್ ಹೊಸ ಬ್ರ್ಯಾಂಡ್
ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಕೃಷಿ ಸೆಕೆಂಡರಿ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಕೆಪೆಕ್ ಮುಖಾಂತರ ರೈತ ಉತ್ಪಾದನಾ‌ ಕೇಂದ್ರಗಳ ಉತ್ಪನ್ನ‌ ಮಾರಾಟಕ್ಕೆ 50 ಕೋಟಿ, ಕೃಷಿ ತೋಟಗಾರಿಕೆ ಉತ್ಪನ್ನಗಳು ಪೋಲಾಗುವುದನ್ನು ತಪ್ಪಿಸಲು ಖಾಸಗಿ ಪಾಲುದಾರಿಕೆಯೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್ ಗಳನ್ನು ಹಂತ-ಹಂತವಾಗಿ ಸ್ಥಾಪಿಸಲಾಗುವುದು. ನೈಸರ್ಗಿಕ ಕೃಷಿ ಪ್ರೋತ್ಸಾಹಕ್ಕೆ ಕೃಷಿ ಮತ್ತು ತೋಟಗಾರಿಕಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ 1 ಸಾವಿರ ಎಕರೆ ಪ್ರದೇಶಗಳಲ್ಲಿ ನೈಸರ್ಗಿಕ ಕೃಷಿ ಪದ್ಧತಿ, ಸಾರ್ವಜನಿಕ ಸ್ಥಿರಕರಣ, ಜೈವಿಕ ವಿಶ್ಲೇಷಣೆ ಅಧ್ಯಯನ ಕೈಗೊಂಡು ರೈತರ ಹೊಲಗಳಿಗೆ ವಿತರಿಸಲಾಗುವುದು. ರಾಜ್ಯದ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಾಗಿದ್ದು, ದೇಶದಲ್ಲೇ ರಾಜ್ಯ ಮೂರನೇ ಸ್ಥಾನದಲ್ಲಿದೆ.  ರಾಜ್ಯದ 57 ತಾಲೂಕುಗಳ ವ್ಯಾಪ್ತಿಯ 2.75 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕ-2ಕ್ಕೆ ಜಾರಿಗೊಳಿಸಲಾಗುವುದು. ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಒಂದು ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲಾಗುವುದು. ಇದಲ್ಲದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಒಂದು ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ಯೋಜಿಸಲಾಗಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಬೆಳೆಯುವ ತೊಗರಿಯನ್ನು ಭೀಮಾ ಪಲ್ಸ್ ಬ್ರ್ಯಾಂಡ್ ನಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಮಹಿಳೆಯರಿಗೆ 'ಕೃಷಿ ಪಂಡಿತ' ಪ್ರಶಸ್ತಿ
ಹಿರೇಕೆರೂರಿನಲ್ಲಿಗೋವಿನ‌ಜೋಳ ಸಂಶೋಧನಾ‌ ಕೇಂದ್ರ ಸ್ಥಾಪನೆ, ಧಾರವಾಡದ ಕೃಷಿ ವಿವಿಯಲ್ಲಿ ಡಾ.ಎಸ್.ವಿ.ಪಾಟೀಲ್ ಕೃಷಿ ಸಂಶೋಧನೆ ಮತ್ತು ತರಬೇತಿ ರೈತರ ಶ್ರೆಯೋಭಿವೃದ್ಧಿ ಪೀಠ ಸ್ಥಾಪಿಸಲು ನಿರ್ಧಾರ, ರೈತ ಮಹಿಳೆ ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಇತರ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕ ಕೃಷಿ ಪ್ರಶಸ್ತಿ ಕೃಷಿ ಪಂಡಿತ ಪ್ರಶಸ್ತಿ ನೀಡಲಾಗುವುದು. ರಾಜ್ಯದ ತೋಟಗಾರಿಕೆ ಬೆಳೆ ವಿಸ್ತರಣೆ 26 ಲಕ್ಷ 32 ಸಾವಿರ ಹೆಕ್ಟೇರ್ ಗಳಾಗಿದ್ದು, ದೇಶದಲ್ಲೇ ಮೊದಲನೇ ಸ್ಥಾನ ಹೊಂದಿದೆ. 2020-21ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ 1 ಲಕ್ಷ 38 ಸಾವಿರ ಫಲಾನುಭವಿಗಳಿಗೆ 240 ಕೋಟಿ ರೂಪಾಯಿ ಸಹಾಯಧನ ನೀಡಿದ್ದು, ತೋಟಗಾರಿಕೆ ಸಾಗುವಳಿ ಕ್ಷೇತ್ರದಲ್ಲಿ 34,700 ಹೆಕ್ಟೇರ್ ಪ್ರದೇಶ ವಿಸ್ತರಿಸಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಪಾರ್ಕ್
ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನವನ್ನು ಯಲಹಂಕ ಬಳಿಯ ಜಾರಕಬಂಡೆ ಕಾವಲು ಪ್ರದೇಶದಲ್ಲಿ 350 ಎಕರೆ ಸರ್ಕಾರಿ ಜಮೀನಿನಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ತೋಟಗಾರಿಕೆಯಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಪರಿಶಿಷ್ಟ ಜಾತಿ, ಪಂಗಡವರಿಗೆ ಶೇಕಡ 90 ರಷ್ಟು ರಿಯಾಯಿತಿ, ಇತರ ವರ್ಗದವರಿಗೆ ಶೇಕಡ 75ರಷ್ಟು ಸಹಾಯಧನ ನೀಡಲಾಗುವುದು. ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಶೇತ್ಯಗಾರ ನಿರ್ಮಿಸಿ ದ್ರಾಕ್ಷಿ ಬೆಳೆ ಸಂಗ್ರಹ, ಸಂಸ್ಕರಣೆ ಮತ್ತು ಸಾಗಣಿಕೆಗಾಗಿ ವೈಜ್ಞಾನಿಕವಾಗಿ ನಿರ್ಮಿಸಲು ಶೀತಲಕೃತ ಸರಕು ಸಾಗಣೆ ವಾಹನಗಳನ್ನು ಒದಗಿಸಲಾಗುವುದು. ರಾಷ್ಟ್ರೀಯ ಖಾದ್ಯತೈಲಗಳ ತಾಳೆಎಣ್ಣೆ ಅಭಿಯಾನದಡಿ  ಮುಂದಿನ 5 ವರ್ಷಗಳಲ್ಲಿ  25 ಸಾವಿರ ಹೆಕ್ಟೇರ್ ಗೆ ಹೆಚ್ಚಿಸುವ ಗುರಿ ಹೊಂದಿದ್ದು, ಇದಕ್ಕೆ 35 ಕೋಟಿ ರೂಪಾಯಿ ಅನುದಾನ ನೀಡಲು ಸರ್ಕಾರದ ನಿರ್ಧಾರ.

ಬ್ಯಾಡಗಿಯಲ್ಲಿ ಸಂಶೋಧನಾ‌ ಕೇಂದ್ರ
ಬ್ಯಾಡಗಿಯಲ್ಲಿ ಮೆಣಸಿನ‌ಕಾಯಿ ಸಾಂಬಾರು ಸಂಶೋಧನಾ‌ ಕೇಂದ್ರ ಸ್ಥಾಪನೆ,  ಹಾನಗಲ್ ನಲ್ಲಿ ಮಾವು ಸಂಗ್ರಹ ಘಟಕ ಸ್ಥಾಪಿಸಲಾಗುವುದು. ಕೊಡಗು ಹಾಗೂ ಜಾಂಬೋಟಿಯಲ್ಲಿ ಜೇನುತುಪ್ಪ ಉತ್ತೇಜಿಸಲು ಹಾಗೂ ಬ್ರ್ಯಾಂಡಿಂಗ್ ಮೂಲಕ ಜಾಗತಿಕ ಮಾರುಕಟ್ಟೆಗೆ ಒಯ್ಯಲು 5 ಕೋಟಿ ರೂಪಾಯಿ ಒದಗಿಸಲಾಗುವುದು. ಕಲಬುರಗಿ ಹಾವೇರಿಯಲ್ಲಿ 30 ಕೋಟಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ರೇಷ್ಮೆ ಮಾರುಕಟ್ಟೆ ನಿರ್ಮಾಣ, ರೇಷ್ಮೆ ಬೆಳೆಗಾರರ ಆದಾಯ ಹೆಚ್ಚಿಸಲು ದ್ವಿತಳಿಗೆ ನೀಡುತ್ತಿರುವ ಪ್ರೋತ್ಸಾಹಧನ ಪ್ರತಿ ಕೆಜಿಗೆ 50 ರೂಪಾಯಿಗಳಂತೆ ಹೆಚ್ಚಳ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ. ರಾಜ್ಯದಲ್ಲಿ ಹಂತ-ಹಂತವಾಗಿ 100 ಪಶು ಚಿಕಿತ್ಸಾಲಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಖಾಲಿ ಇರುವ 400 ಪಶು ವೈದ್ಯರ ನೇಮಕಾತಿಗೆ ಕ್ರಮವಹಿಸಲಾಗಿದೆ.

ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್
ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಪ್ರಪ್ರಥಮ ಬಾರಿಗೆ ಸರಳ ನಿಬಂಧನೆಗಳೊಂದಿಗೆ ಸಾಲ ಸೌಲಭ್ಯ ನೀಡಲು 'ಕೃಷಿ ಸಮೃದ್ಧಿ ಸಹಕಾರ ಬ್ಯಾಂಕ್' ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದರಿ ಬ್ಯಾಂಕು ಹಾಲು ಉತ್ಪಾದಕರ ಸಂಘ, ಕರ್ನಾಟಕ ಹಾಲು ಮಹಾಮಂಡಳ, ಜಿಲ್ಲಾ ಹಾಲು ಒಕ್ಕೂಟಗಳ ಒಟ್ಟಾರೆ 250 ರೂ.ಗಳ ಮತ್ತು ರಾಜ್ಯ ಸರ್ಕಾರ 100 ಕೋಟಿ ರೂಪಾಯಿಗಳ ಷೇರು ಬಂಡವಾಳ ಒದಗಿಸಲಾಗಿದೆ.

ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪನೆ
ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ, ಕರ್ನಾಟಕದ ಹಾಲು ಒಕ್ಕೂಟ ಸಂಯೋಗದೊಂದಿಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಹಾಲು ಒಕ್ಕೂಟ ರಚಿಸಲು ಉದ್ದೇಶಿಸಲಾಗಿದೆ. 50 ಕೋಟಿ ರೂಪಾಯಿ ವೆಚ್ಚದಲ್ಲಿ ಗೋ ಶಾಲೆಗಳನ್ನು 30 ರಿಂದ 100ಕ್ಕೆ ಹೆಚ್ಚಿಸಲು ನಿರ್ಧಾರ, ಗೋವುಗಳ ಸಾರ್ವಜನಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವಾರ್ಷಿಕ 11 ಸಾವಿರ ರೂಪಾಯಿಗೆ ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲು ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಾರಂಭಿಸಲಾಗುವುದು. ಅನುಗ್ರಹ ಕೊಡುಗೆ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ 3ರಿಂದ 6 ತಿಂಗಳ ವಯಸ್ಸಿನ ಕುರಿ, ಮೇಕೆಗಳು ನೀಡುವ ಪರಿಹಾರ ಧನವನ್ನು 2,500 ರಿಂದ 3,500ಕ್ಕೆ ಹೆಚ್ಚಿಸಲಾಗಿದೆ. ಕುರಿಗಾಹಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ 5 ಲಕ್ಷ ರೂಪಾಯಿ ವಿಮಾ ಯೋಜನೆ. ಆರ್ಥಿಕವಾಗಿ ಹಿಂದುಳಿದ ಕುರಿಗಾರರಿಗೆ ವಸತಿ ಸೌಕರ್ಯ ಜೊತೆಗೆ ಕುರಿ ದೊಡ್ಡಿ ನಿರ್ಮಿಸಲು 5 ಲಕ್ಷ ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com