ಕರ್ನಾಟಕ ಬಜೆಟ್- ಮಹಿಳೆಯರೇ ಟಾರ್ಗೆಟ್: ಸ್ತ್ರೀಯರ ರಕ್ಷಣೆಗಾಗಿ ಸೇಫ್ ಸಿಟಿ ಪ್ರಾಜೆಕ್ಟ್; ಜನನಿಬಿಡ ಪ್ರದೇಶದಲ್ಲಿ SHE-ಟಾಯ್ಲೆಟ್!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದು, ಇದರಲ್ಲಿ ನಿರೀಕ್ಷೆಯಂತೆ ಸ್ತ್ರೀ ಸಬಲೀಕರಣಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಹಾಗಾದ್ರೆ ಈ ಬಾರಿಯು ಬಜೆಟ್ನಲ್ಲಿ ಸ್ತ್ರೀ ಸಬಲೀಕರಣ ನಿಟ್ಟಿನಲ್ಲಿ ಘೋಷಣೆಯಾದ ಯೋಜನೆಗಳೇನು? ಇಲ್ಲಿದೆ ನೋಡಿ ಪಟ್ಟಿ
ರಾಜ್ಯ ಬಜೆಟ್ ಮಂಡನೆ ಅನ್ವಯ 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದು ಮನೆಯಲ್ಲೇ ಇರುವ ಅನೇಕ ಗೃಹಿಣಿಯರು ಹಾಗೂ ಹೆಣ್ಣು ಮಕ್ಕಳಿಗೆ ಸಹಾಯ ಮಾಡಲಿದೆ.
ಮಹಿಳಾ ಕೃಷಿ ಕಾರ್ಮಿಕರಿಗೆ 500 ರೂ ಸಹಾಯಧನವನ್ನೂ ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾಗಿದೆ. ಆರ್ಥಿಕವಾಗಿ ಕಷ್ಟವನ್ನೆದುರಿಸುತ್ತಿರುವ ಬಡ ವರ್ಗದ ಮಹಿಳೆಯರಿಗೆ ಈ ಯೋಜನೆ ಲಾಭ ತಂದುಕೊಡಲಿದೆ. ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದಾರೆ. ಇದು ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಬಲ ನೀಡಲಿದ್ದು, ಹೆಣ್ಮಕ್ಕಳ ಶಿಕ್ಷಣಕ್ಕೆ ಮತ್ತಷ್ಟು ಒತ್ತು ನೀಡಲಿದೆ.
ಸಂಘಟಿತ ವಲಯದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ಘೋಷಿಸಲಾಗಿದೆ. ಇದರಡಿ 30 ಲಕ್ಷ ಮಹಿಳೆಯರಿಗೆ ಅನುಕೂಲವಾಗುವಂತೆ 1 ಸಾವಿರ ಕೋಟಿ ರೂ ವ್ಯಯಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ. ಸರ್ಕಾರಿ ಪದವಿ ಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲು ನಿರ್ಧಾರ. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಮಾಸಾಶನ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಇಂತಹ ಕ್ರೌರ್ಯಕ್ಕೆ ನಲುಗಿದ ಹೆಣ್ಮಕ್ಕಳಿಗೆ ಬಲ ತುಂಬಿದಂತಾಗಿದೆ. ಬೆಂಗಳೂರಿನಲ್ಲಿ 9 ಕಾನೂನು ಸುವ್ಯವಸ್ಥೆ, ಆರು ಮಹಿಳಾ, ಐದು ಸಂಚಾರಿ ಠಾಣೆಗಳನ್ನ ಹೊಸದಾಗಿ ಸ್ಥಾಪನೆಯ ಘೋಷಣೆ ಮಾಡಲಾಗಿದೆ. ಇದು ಹೆಣ್ಮಕ್ಕಳ ರಕ್ಷಣೆಗೆ ಮತ್ತಷ್ಟು ಒತ್ತು ನೀಡಲಿದೆ.
ಆಶಾ ಕಾರ್ಯಕರ್ತರೆಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಬಿಸಿಯೂಟ ತಯಾರಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಗ್ರಾಮಸಹಾಯಕರು, ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರು, ಗ್ರಾಮ ಪಂಚಾಯ್ತ್ರಿ ಸದಸ್ಯರ ಗೌರವ ಧನ 1000 ಹೆಚ್ಚಳ ಮಾಡಲು ನಿರ್ಧರಿಸಿದೆ. ಶೂನ್ಯ ಬಡ್ಡಿದರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ ಯೋಜನೆಯನ್ನೂ ಘೋಷಿಸಿದ್ದು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1800 ಕೋಟಿ ರೂ.ಗಳಷ್ಟು ವಿತರಿಸುವ ಗುರಿ ಹೊಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ, ಮಕ್ಕಳ ಪೌಷ್ಟಿಕತೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಪ್ರತ್ಯೇಕ ಇಲಾಖೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ‘ಸೇಫ್ ಸಿಟಿ ಪ್ರಾಜೆಕ್ಟ್’ ಯೋಜನೆಯನ್ನು ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ಯೋಜನೆಯಡಿ ಸಿಸಿಟಿವಿ ಅಳವಡಿಕೆಗೆ 261 ಕೋಟಿ ರೂಪಾಯಿ ನೀಡೋದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ‘SHE-ಟಾಯ್ಲೆಟ್’ ನಿರ್ಮಾಣ ಮಾಡಲಾಗುತ್ತಿದೆ. SHE-ಟಾಯ್ಲೆಟ್‌ಗಳಲ್ಲಿ ಫೀಡಿಂಗ್ ಸೌಲಭ್ಯ, ಮೊಬೈಲ್ ಚಾರ್ಜಿಂಗ್, ಇತರೆ ಮೂಲ ಸೌಕರ್ಯಗಳು ಇರಲಿದೆ. ಒಟ್ಟಾರೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9,698 ಕೋಟಿ ರೂಪಾಯಿ ಅನುದಾನ ನೀಡಲು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ