5,64,896 ಕೋಟಿ ರೂ. ಸಾಲ; ಬಿಜೆಪಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಕಳೆದ ಐದು ವರ್ಷಗಳಲ್ಲಿ 2,54,760 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಕಳೆದ ಐದು ವರ್ಷಗಳಲ್ಲಿ 2,54,760 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿ ಅವರು 3,09,182 ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. ಇದು ಚುನಾವಣಾ ಬಜೆಟ್, ನಿರ್ಗಮನ ಬಜೆಟ್ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಕಳೆದ ಬಜೆಟ್ ಒಟ್ಟು 206 ಕಾರ್ಯಕ್ರಮಗಳನ್ನು ಘೋಷಿಸಿತ್ತು. ಆದರೆ ಇದರಲ್ಲಿ ಹಲವು ಕಾರ್ಯಕ್ರಮಗಳು ಜಾರಿಯಾಗಿಲ್ಲ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ. 92 ರಷ್ಟು ಭರವಸೆ ಸಹ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಜನರಿಗೆ ಸುಳ್ಳು ಭರವಸೆ ನೀಡಿ, ಕನಸಿನ ಲೋಕದಲ್ಲಿ ತೇಲಾಡಿಸಿ ನಂತರ ಯಾವುದೇ ಕೆಲಸ ಮಾಡದೆ ಭ್ರಮನಿರಶನ ಮಾಡಿದ್ದಾರೆ ಎಂದರು.

ಎಸ್​ಸಿಪಿ, ಟಿಎಸ್​ಪಿ ಅನುದಾನ ಕಡಿತಗೊಳಿಸಿ ದ್ರೋಹಮಾಡಿದ್ದಾರೆ. ರಾಜ್ಯದ ಒಟ್ಟು 5,64,896 ಕೋಟಿ ಸಾಲವಾಗುತ್ತೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ನಾನು ಅಧಿಕಾರದಿಂದ ಕೆಳಗಿಳಿಯುವಾಗ 2,42,000 ಕೋಟಿ ರೂಪಾಯಿ ಸಾಲ ಇತ್ತು. ಕಳೆದ 5 ವರ್ಷಗಳಲ್ಲಿ ರಾಜ್ಯದ ಸಾಲ 3,22,000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು.

ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 41,914 ಕೋಟಿ ರೂ. ಸಾಲ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ 2,54,760 ಕೋಟಿ ರೂಪಾಯಿ ಸಾಲವಾಗಿದೆ. ನನ್ನ 5 ವರ್ಷಗಳ ಅವಧಿಯಲ್ಲಿ 1,16,512 ಕೋಟಿ ಸಾಲವಾಗಿತ್ತು. ಬಿಜೆಪಿಯವರು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. 5,64,896 ಕೋಟಿ ಸಾಲಕ್ಕೆ 34,000 ಕೋಟಿ ರೂ. ಬಡ್ಡಿ ಕಟ್ಟಬೇಕಿದೆ. ಚುನಾಯಿತ ಸರ್ಕಾರ ಜನರಿಗೆ ಉತ್ತರದಾಯಿಯಾಗಿರಬೇಕು. ಸರ್ಕಾರ ಎಂದಿಗೂ ಮತದಾರರಿಗೆ ಮಾಹಿತಿ ಮುಚ್ಚಿಡಬಾರದು. ರಾಜ್ಯದಿಂದ 4 ಲಕ್ಷದ 75 ಸಾವಿರ ಕೋಟಿ ತೆರಿಗೆ ವಸೂಲಿ ಆಗಿದೆ ಎಂದು ಮಾಜಿ ಸಿಎಂ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com