ಕರ್ನಾಟಕ ಬಜೆಟ್: ಶಾಲೆಗಳಲ್ಲಿ ವಾರಕ್ಕೆ 2 ದಿನ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣು ವಿತರಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇನ್ನುಮುಂದೆ ವಾರದಲ್ಲಿ ಎರಡು ದಿನ ಮೊಟ್ಟೆ, ಶೇಂಗಾಚಿಕ್ಕಿ ಮತ್ತು ಬಾಳೆಹಣ್ಣನ್ನು ವಿತರಣೆ..
Published: 07th July 2023 03:59 PM | Last Updated: 07th July 2023 04:09 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇನ್ನುಮುಂದೆ ವಾರದಲ್ಲಿ ಎರಡು ದಿನ ಮೊಟ್ಟೆ, ಶೇಂಗಾಚಿಕ್ಕಿ ಮತ್ತು ಬಾಳೆಹಣ್ಣನ್ನು ವಿತರಣೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಯೋಜನೆಯನ್ನು 9 ಮತ್ತು 10ನೇ ತರಗತಿವರೆಗೂ ವಿಸ್ತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಈವರೆಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಮಾತ್ರ ಮೊಟ್ಟೆ , ಶೇಂಗಾಚಿಕ್ಕಿ ಹಾಗೂ ಬಾಳೆಹಣ್ಣನ್ನು ವಿತರಿಸಲಾಗುತ್ತಿತ್ತು. ಇನ್ನು ಮುಂದೆ ಇದನ್ನು ವಾರದಲ್ಲಿ ಎರಡು ದಿನ ವಿತರಣೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಇದನ್ನು ಓದಿ: ರಾಜ್ಯ ಬಜೆಟ್ 2023: ತೆರಿಗೆ ಹೆಚ್ಚಳದ ಮೂಲಕ ಬೊಕ್ಕಸಕ್ಕೆ 1,82,500 ಕೋಟಿ ರೂಪಾಯಿ ಸಂಗ್ರಹಣೆಯ ಗುರಿ
ಈ ಯೋಜನೆಯಿಂದ ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಉಂಟಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಈ ಯೋಜನೆಯನ್ನು 9 ಮತ್ತು 10ನೇ ತರಗತಿಯ ವ್ಯಾಸಂಗ ಮಾಡುತ್ತಿರುವ 60 ಲಕ್ಷ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಇದಕ್ಕಾಗಿ 280 ಕೋಟಿ ರೂಪಾಯಿ ಅನುದಾನ ಮೀಸಲಿಡುವುದಾಗಿ ಸಿಎಂ ತಿಳಿಸಿದ್ದಾರೆ.
ಮಕ್ಕಳಲ್ಲಿ ಉಂಟಾಗುವ ಕಲಿಕಾ ನ್ಯೂನತೆಯನ್ನು ನಿವಾರಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮರುಸಿಂಚನ ಎಂಬ ಯೋಜನೆಯಡಿ ಹಿಂದುಳಿದ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರೌಢ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.