
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಪಾಲ್ಗೊಳ್ಳುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯನ್ನು ಬಹಿಷ್ಕರಿಸಿಲ್ಲ, ಆದರೆ ಮೈಸೂರಿನಲ್ಲಿ ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರು ಭಾಗವಹಿಸುತ್ತಿಲ್ಲ. ನೀತಿ ಆಯೋಗದ ಆಡಳಿತ ಮಂಡಳಿ ಸಭೆಗೆ ತಮ್ಮ ಭಾಷಣವನ್ನು ಕಳುಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದಾಗ್ಯೂ, ಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣವನ್ನು ಯಾರು ಮಂಡಿಸಲಿದ್ದಾರೆ ಎಂಬುದು ಸ್ಪಷ್ಪವಾಗಿಲ್ಲ.
ಕೇರಳದಲ್ಲಿ ಪಿಣರಾಯ್ ಬದಲಿಗೆ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಅವರನ್ನು ಕಳುಹಿಸಲಾಗಿದೆ. ಆದಾಗ್ಯೂ, ಅವರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇಲ್ಲಿಯವರೆಗೂ ಸ್ಪಷ್ಪವಾಗಿಲ್ಲ.
ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳದಿರಲು ಪಿಣರಾಯ್ ವಿಜಯನ್ ಕಾರಣ ನೀಡಿಲ್ಲ. ಕಳೆದ ವರ್ಷವೂ ಅವರು ಸಭೆಯಿಂದ ದೂರ ಉಳಿದಿದ್ದರು. ಅವರ ಬದಲಿಗೆ ಬಾಲಗೋಪಾಲ್ ಅವರನ್ನು ಕಳುಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಶನಿವಾರ ನಡೆಯಲಿರುವ ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯು, 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ರಾಜ್ಯಗಳ ಗುರಿಯನ್ನು ಕೇಂದ್ರೀಕರಿಸಿ ನಡೆಯಲಿದೆ. '2047ರಲ್ಲಿ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ' ಎಂಬ ವಿಷಯದ ಅಡಿಯಲ್ಲಿ ಸಭೆ ನಡೆಯಲಿದೆ ಎಂದು ಅದು ತಿಳಿಸಿದೆ.
Advertisement