ಕೇಂದ್ರ ಬಜೆಟ್ 2023: ಚುನಾವಣೆ ಮೇಲೆ ಕಣ್ಣು; ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೆರವು
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ನೆರವನ್ನು ಕೇಂದ್ರದಿಂದ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಘೋಷಿಸಿದ್ದಾರೆ.
Published: 01st February 2023 11:57 AM | Last Updated: 01st February 2023 07:30 PM | A+A A-

ಮುಖ್ಯಮಂತ್ರಿ ಅಭಿನಂದನೆ ಚಿತ್ರ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ನೆರವನ್ನು ಕೇಂದ್ರದಿಂದ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಘೋಷಿಸಿದ್ದಾರೆ. ಲೋಕಸಭೆಯಲ್ಲಿಂದು ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಬರ ಪೀಡಿತ ಮಧ್ಯ ಕರ್ನಾಟಕದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರದಿಂದ ರೂ. 5,300 ಕೋಟಿ ನೆರವು ನೀಡಲಾಗುವುದು ಎಂದರು.
ಈ ಯೋಜನೆಯಡಿ ಮೊದಲ ಹಂತದಲ್ಲಿ ತುಂಗಾ ನದಿಯಿಂದ 17.40 ಸಾವಿರ ಮಿಲಿಯನ್ ಟಿಎಂಸಿ ನೀರನ್ನು ಭದ್ರಾಗೆ ಮತ್ತು ಎರಡನೇ ಹಂತದಲ್ಲಿ ಭದ್ರಾ ಜಲಾಶಯದಿಂದ 29.90 ಟಿಎಂಸಿ ನೀರನ್ನು ಕೃಷ್ಣಾ ಜಲಾನಯನ ಪ್ರದೇಶದ ತುಂಗಭದ್ರಾ ಉಪ ಜಲಾನಯನ ಪ್ರದೇಶದಲ್ಲಿರುವ ಅಜ್ಜಂಪುರ ಬಳಿಯ ಸುರಂಗಕ್ಕೆ ಎತ್ತುವ ಉದ್ದೇಶ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಒದಗಿಸುವ ಘೋಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆಯೂ ಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ಈ ಸಾಲಿನ ಕೇಂದ್ರೀಯ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5,300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ @nsitharaman ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು" : ಮುಖ್ಯಮಂತ್ರಿ @BSBommai pic.twitter.com/BrRAYZQdZR
— CM of Karnataka (@CMofKarnataka) February 1, 2023
2000ನೇ ಇಸವಿಯಲ್ಲಿ ಯೋಜನೆ ಘೋಷಿಸಲಾಯಿತು. 2003ರಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. 2008ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವುದು ವಿಳಂಬ, ವೆಚ್ಚ ಹೆಚ್ಚಳ ಸೇರಿದಂತೆ ನಾನಾ ಕಾರಣಗಳಿಂದ ಯೋಜನೆ ಆಮೆಗತಿಯಲ್ಲಿ ಸಾಗಿತ್ತು. ಸದ್ಯ ನಿಧಾನಕ್ಕೆ ವೇಗ ದೊರೆಯುತ್ತಿದೆ. ಇದೀಗ ಕೇಂದ್ರದ ನೆರವಿನಿಂದ ಮತ್ತಷ್ಟು ಉತ್ತೇಜನ ಸಿಗಲಿದೆ.