ಸ್ಕಿಲ್ ಇಂಡಿಯಾಗೂ ಸೆಸ್
ನವದೆಹಲಿ: ಸ್ವಚ್ಛ ಭಾರತ ಯೋಜನೆಗೆ ಎಲ್ಲ ಸೇವೆಗಳ ಮೇಲಿನ ತೆರಿಗೆ ಮೇಲೆ ಶೇ.0.50ರಷ್ಟು ಸೆಸ್ ವಿಧಿಸಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಸೆಸ್ ಹೇರಲು ಹೊರಟಿದೆ. ಕೌಶಲ್ಯ ಅಭಿವೃದ್ಧಿ ಯೋಜನೆಗೆ ನಿಧಿ ಸಂಗ್ರಹಿಸಲು ಎಲ್ಲ ತೆರಿಗೆಗಳ ಮೇಲೆ ಶೇ.2ರಷ್ಟು `ಸ್ಕಿಲ್ ಸೆಸ್' ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
4 ಲಕ್ಷ ಕೋಟಿ ರೂಪಾಯಿಯ ಈ ಯೋಜನೆಗೆ ಇದುವರೆಗೂ ಅಲ್ಪ ಮೊತ್ತ ಮಾತ್ರ ನೀಡಲು ಸಾಧ್ಯವಾಗಿದೆ. ಇದರಿಂದ ಕೇಂದ್ರ ಸರ್ಕಾರ ನಾಗರಿಕರು ಮತ್ತು ಕಂಪನಿಗಳಿಗೆ ತೆರಿಗೆ ವಿಧಿಸುವ ಮೂಲಕ ನಿಧಿ ಸಂಗ್ರಹಿಸಲು ಮುಂದಾಗಿದೆ.
2022ರೊಳಗೆ ಸುಮಾರು 50 ಕೋಟಿ ಭಾರತೀಯರಿಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಕಳೆದ ಜುಲೈಯಲ್ಲಿ ಯೋಜನೆಗೆ ಚಾಲನೆ ನೀಡಿದ್ದರು. ಕೌಶಲ ನೀಡಲು ಮತ್ತು ನಿಧಿ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತಡ ಹಾಕಲಿದ್ದು, ಯೋಜನೆಗೆ ಹಣದ ಕೊರತೆ ಉಂಟಾಗದಂತೆ ನೋಡಿಕೊಳ್ಳಲಿದ್ದೇವೆ ಎಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಸಚಿವ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಸಚಿವಾಲಯದ ಲೆಕ್ಕಾಚಾರದಂತೆ, 500 ದಶಲಕ್ಷ ಮಂದಿಯ ತರಬೇತಿಗೆ ರು. 4 ಲಕ್ಷ ಕೋಟಿ ಅಗತ್ಯವಿದೆ. 2015-16ರಲ್ಲಿ ರು.15,000 ಕೋಟಿ ನಿಧಿ ಮಾತ್ರ ದೊರೆತಿದೆ. ಸಚಿವಾಲಯದ ಮೂಲಗಳು ತಿಳಿಸಿದಂತೆ, ಈ ಸೆಸ್ ಹೇರಿಕೆಯ ಪ್ರಸ್ತಾವನೆಯನ್ನು ವಿತ್ತ ಇಲಾಖೆಗೆ ವರ್ಷದ ಆದಿಯಲ್ಲೇ ಸಲ್ಲಿಸಲಾಗಿತ್ತು. ಆದರೆ ವಿತ್ತ ಇಲಾಖೆ ಅದನ್ನು ತಿರಸ್ಕರಿಸಿತ್ತು. ಈಗ ಯೋಜನೆಯನ್ನೇ ಪರಿಷ್ಕರಿಸಲಾಗಿದೆ. ಸರಕಾರಿ ಲೆಕ್ಕಾಚಾರದಂತೆ, ಭಾರತದಲ್ಲಿ ಕೇವಲ ಶೇ.4.7 ಮಂದಿ ಮಾತ್ರ ವೃತ್ತಿಪರ ಶಿಕ್ಷಣ ಪಡೆದಿದ್ದಾರೆ. ಇತರ ಕೈಗಾರೀಕೃತ ದೇಶಗಳಲ್ಲಿ ಇದು ಶೇ.60ರಷ್ಟಿದೆ. ಬಿಗಿಯಾದ ಕುಟುಂಬ ಯೋಜನೆ ಹಾಗೂ ಜನಸಂಖ್ಯೆ ಇಳಿಕೆಯಿಂದಾಗಿ ಮುಂದಿನ ದಶಕದಲ್ಲಿ ಚೀನಾದ ದುಡಿಯುವ ಮಂದಿಯಲ್ಲಿ 6 ದಶಲಕ್ಷ ಇಳಿಕೆಯಾಗಲಿದೆ. ಅದೇ ವೇಳೆಗೆ ಭಾರತದ ದುಡಿಯುವ ಮಂದಿಯಲ್ಲಿ 12 ದಶಲಕ್ಷ ಏರಿಕೆಯಾಗಲಿದೆ ಎಂದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ನಾನಾ ರೀತಿಯ 27 ಸೆಸ್‍ಗಳನ್ನು ವಿಧಿಸುತ್ತಿವೆ. ಕೇಂದ್ರದ ತೆರಿಗೆ ಆದಾಯದಲ್ಲಿ ಶೇ.17ರಷ್ಟು ಈ ಸೆಸ್‍ಗಳಿಂದಲೇ ಬರುತ್ತಿದೆ. ಈ ಸೆಸ್‍ಗಳಿಂದ ಸಂಗ್ರಹಿಸಿದ ಹಣ ಆಯಾ ಯೋಜನೆಗಳಿಗೆ ಬಳಕೆಯಾಗುತ್ತದೆ. ಹೆಚ್ಚಳವಾದ ನಿಧಿ ದೇಶದ ಸಮಗ್ರ ನಿಧಿಗೆ ಸೇರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ