ನವದೆಹಲಿ: ರಿಯಲ್ ಎಸ್ಟೇಟ್ ಕಂಪನಿಗಳಿಂದಾಗುತ್ತಿದ್ದ ಕಿರಿಕಿರಿ, ಮೋಸ, ವಂಚನೆ, ನಿಗದಿತ ಅವಧಿಗೆ ಸ್ವತ್ತು ಹಸ್ತಾಂತರಿಸದಿರುವುದು ಮತ್ತಿತರ ಹಲವು ರೀತಿಯ ಸಮಸ್ಯೆಗಳಿಂದ ಇನ್ನು ಗ್ರಾಹಕರಿಗೆ ಮುಕ್ತಿ ಸಿಗಲಿದೆ.
ರಾಜ್ಯಸಭೆಯ ಸೆಲೆಕ್ಟ್ ಕಮಿಟಿ ಶಿಫಾರಸು ಮಾಡಿದ್ದ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ-2015ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು ಸಂಸತ್ತಿನ ಅನುಮೋದನೆಯೊಂದೇ ಬಾಕಿ ಉಳಿದಿದೆ.
ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದ ನಂತರ ಕ್ಷೇತ್ರದಲ್ಲಿನ ಬಹುತೇಕ ಸಮಸ್ಯೆ ಗಳು ನಿವಾರಣೆಯಾಗಲಿವೆ ಎಂದು ಆಶಿಸಿದ. ರಿಯಾಲ್ಟಿ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ, ಹೂಡಿಕೆದಾರರ ಹಿತರಕ್ಷಣೆ, ಪಾರದರ್ಶಕತೆ, ಸಮರ್ಥ ಮತ್ತು ಗುಣಮಟ್ಟದ ಕಾಮಗಾರಿ ಯನ್ನು ತರಲು ಸಾಧ್ಯವಾಗಲಿದೆ.
ರಾಜ್ಯಗಳು ಆರು ತಿಂಗಳೊಳಗೆ ಪ್ರಾಧಿಕಾರಗಳನ್ನು ರಚಿಸಬೇಕು ಮತ್ತು ಪ್ರಾಧಿಕಾರಿಗಳು ರಚನೆಯಾದ ಮೂರು ತಿಂಗಳೊಳಗೆ ಹೊಸ ನಿಯಮಗಳನ್ನು ರಚಿಸಬೇಕೆಂದು ಸೂಚಿಸಲಾಗಿದೆ.
ರಿಯಾಲ್ಟಿ ಕಂಪನಿಗಳು ನಿಗದಿತ ಅವಧಿಯೊಳಗೆ ಮನೆ ನಿರ್ಮಿಸಿ ನೀಡದಿದ್ದಲ್ಲಿ ಗ್ರಾಹಕರಿಗೆ ನಿಗದಿತ ಬಡ್ಡಿಯನ್ನು ಪಾವತಿಸ ಬೇಕು. ಕಟ್ಟಡ ನೀಡಿದ ಎರಡು ವರ್ಷಗಳೊಳಗೆ ನಿರ್ಮಾಣ ದೋಷ ಕಂಡುಬಂದಲ್ಲಿ ಕಂಪನಿ ಸರಿಪಡಿಸಿಕೊಡಬೇಕಾಗಿತ್ತು. ಈಗ ಈ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ.