
ಅಥೆನ್ಸ್: ಗ್ರೀಕ್‍ನಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿ ನೆಲೆಸಿರುವ 15 ಸಾವಿರ ಭಾರತೀಯರು ಆತಂಕದಲ್ಲಿ ಸಿಲುಕಿದ್ದಾರೆ. ಕೆಲವರು ದೇಶ ಬಿಡುವ ಆಲೋಚನೆ ಮಾಡಿದ್ದರೆ ಮತ್ತೆ ಕೆಲವರು ಅಲ್ಲಿಂದ ಹೊರಬರಲು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ಹೇರಿರುವ ಷರತ್ತುಗಳನ್ನು ಒಪ್ಪಬೇಕೆ ಬೇಡವೆ ಎಂಬುದರ ಕುರಿತು ಜು.5 ಭಾನುವಾರ ಜನಾದೇಶ ನಡೆಯಲಿದ್ದು ಇದರಿಂದ ಬರುವ ಫಲಿತಾಂಶ ಗ್ರೀಕ್ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ.
ಮುಂದೆ ಎದುರಾಗಬಹುದಾದ ಬಿಕ್ಕಟ್ಟನ್ನು ಗ್ರೀಕ್ ಸರ್ಕಾರ ಯಾವ ರೀತಿ ನಿಭಾಯಿಸಲಿದೆ ಎಂಬುದನ್ನು ಭಾರತೀಯರು ಕಾದು ನೋಡುತ್ತಿದ್ದಾರೆ. ಗ್ರೀಕ್‍ನ ಹಣಕಾಸು ಪರಿಸ್ಥಿತಿ ಸರಿ ದಾರಿಗೆ ಬರದಿದ್ದಲ್ಲಿ ನಾನು ಕೆನಡಾಗೆ ಹೋಗುವ ಚಿಂತನೆ ನಡೆಸಿರುವುದಾಗಿ ಕಳೆದೊಂದು ದಶಕದಿಂದ ಇಲ್ಲಿ ನೆಲೆಸಿರುವ ಕಾಶ್ಮೀರ ಮೂಲದ ಚೀಮಾ ಹೇಳಿದ್ದಾರೆ.
ಪಂಜಾಬ್ ಮೂಲದ ಟ್ಯಾಕ್ಸಿ ಚಾಲಕರಾದ ರವಿ ಕುಮಾರ್ ಸಹ ಇಂತದೇ ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಪದವಿ ಮುಗಿದ ನಂತರ ಇಲ್ಲಿಗೆ ಬಂದೆ. ಆಗ ಯಾವುದರ ಕುರಿತೂ ಚಿಂತಿಸಿರಲಿಲ್ಲ. ಈಗ ಹತ್ತು ಬಾರಿ ಯೋಚಿಸುವಂತಾಗಿದೆ. ನಾನು ಇಲ್ಲಿಗೆ ಬಂದಾಗ ತಿಂಗಳಿಗೆ 2100 ಯುರೊ ವೇತನ ಪಡೆಯುತ್ತಿದ್ದೆ ಈಗ 700 ಯುರೊಗೆ ಇಳಿದಿದೆ ಎಂದು
ನೋವಿನಿಂದ ಹೇಳಿದ್ದಾರೆ.
ಬಹುತೇಕ ಭಾರತೀಯರು ತಮ್ಮ ಉಳಿತಾಯದ ಹಣವನ್ನು ಕಳೆದ ತಿಂಗಳು ಬ್ಯಾಂಕ್‍ಗಳನ್ನು ಮುಚ್ಚುವ ಮೊದಲೇ ಡ್ರಾ ಮಾಡಿದ್ದಾರೆ. ಆದರೂ ನಮ್ಮಲ್ಲಿ ಹಣ ಉಳಿದಿಲ್ಲ, ಹಣಕಾಸಿನ ಬರ ಎದುರಿಸುತ್ತಿದ್ದೇವೆ ಎಂದಿದ್ದಾರೆ. ಗ್ರೀಸ್‍ನಲ್ಲಿ ನೆಲೆಸಿರುವ ಭಾರತೀಯರ ಪೈಕಿ ಶೇ.90ರಷ್ಟು ಜನ ಪಂಜಾಬ್ ಮೂಲದವರಾಗಿದ್ದು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಉಳಿದ ಶೇ.10ರಷ್ಟು ಮಂದಿ ಮಾತ್ರ ಉದ್ಯಮ ಮತ್ತು ಸೇವಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗ್ರೀಕ್ ಭಾರತೀಯ ಸಂಸ್ಕೃತಿ ಮತ್ತು ಕಲ್ಯಾಣ ಒಕ್ಕೂಟದ ಅಧ್ಯಕ್ಷರಾಗಿರುವ ಮಧುರ್ ಗಾಂಧಿ ಹೇಳಿದ್ದಾರೆ.
ದಿನಸಿ ಇಲ್ಲ; ಕ್ರೆಡಿಟ್ ಕಾರ್ಡ್ ಸ್ವೀಕರಿಸುತ್ತಿಲ್ಲ:
ಗ್ರೀಕ್‍ನ ದಿನಸಿ ಅಂಗಡಿಗಳಲ್ಲಿ ಉತ್ಪನ್ನಗಳೇ ಇಲ್ಲದಂತಾಗಿವೆ. ಕೇವಲ ಕ್ರೆಡಿಟ್ ಕಾರ್ಡ್ ಗಳಲ್ಲೇ ಎಲ್ಲ ವಹಿವಾಟು ನಡೆಸುತ್ತಿದ್ದ ಗ್ರೀಕ್ ಜನಕ್ಕೆ ಈಗ ಅಲ್ಲಿನ ಪೆಟ್ರೋಲ್ ಬಂಕ್‍ಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು ಮತ್ತಿತರ ಮಳಿಗೆಗಳು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಗ್ರೀಕ್ ಜನ ಪರದಾಡುತ್ತಿದ್ದಾರೆ. ಊಟ ಮಾಡಲೂ ಆಗದಂತಹ ಸ್ಥಿತಿಯಲ್ಲಿದ್ದಾರೆ. ಪಿಂಚಣಿದಾರರು ದಿನಗಟ್ಟಲೆ ಎಟಿಎಂಗಳ ಮುಂದೆ ನಿಲ್ಲಬೇಕು. ಹಾಗಿದ್ದರೂ ಎಲ್ಲರಿಗೂ ಹಣ ಸಿಗಲಿದೆ ಎಂಬ ಖಾತರಿಯೂ ಇಲ್ಲವಾಗಿದೆ.
ಸಾಲ ನೀಡಿರುವವರು ಭಯೋತ್ಪಾದಕರು: ಗ್ರೀಕ್ ಹಣಕಾಸು ಸಚಿವ ಯಾನಿಸ್ ರೊಫಾಕಿಸ್ ಸಾಲ ನೀಡಿರುವ ಹಣಕಾಸು ಸಂಸ್ಥೆಗಳನ್ನು ಭಯೋತ್ಪಾದಕರು ಎಂದು ಟೀಕಿಸಿದ್ದಾರೆ. ಗ್ರೀಕ್‍ನೊಂದಿಗೆ ಅವರು ಭಯೋತ್ಪಾದಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಅಲ್ಲಿನ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್‍ಗಳನ್ನು ಮುಚ್ಚಿರಿ ಎಂದು ಅವರೇಕೆ ಒತ್ತಡ ಹೇರುತ್ತಿದ್ದಾರೆ? ಜನರಲ್ಲಿ ಭೀತಿ ತುಂಬಲು. ಭೀತಿ ತರುವುದೆಂದರೆ ಭಯೋತ್ಪಾದನೆ ಎಂತಲೇ ಅರ್ಥ ಎಂದಿದ್ದಾರೆ.
ಫೋಟೋ ಫಿನಿಷ್: ಭಾನುವಾರದ ಜನಾದೇಶ ಎತ್ತ ಕಡೆ ಹೊರಳಲಿದೆ ಎಂದು ಸದ್ಯಕ್ಕೆ ಯಾರಿಂದಲೂ ಅಂದಾಜಿಸಲು ಸಾಧ್ಯವಾಗಿಲ್ಲ. ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಹಣಕಾಸು ಸಂಸ್ಥೆಗಳು ವಿಧಿಸುವ ಪರವಾಗಿ ಶೇ.44.1 ರಷ್ಟು ಮತ್ತು ಅದರ ವಿರುದಟಛಿ ಶೇ.43.7 ರಷ್ಟು ಜನಾದೇಶ ಬರಬಹುದು ಎಂದು ಅಂದಾಜಿಸಲಾಗಿದೆ. ಹಣಕಾಸು ಸಂಸ್ಥೆಗಳು ವಿಧಿಸಿರುವ ಷರತ್ತುಗಳ ವಿರುದ್ಧ ಮತ ಚಲಾಯಿಸುವಂತೆ ಗ್ರೀಕ್ ಪ್ರಧಾನಿ ಅಲೆಕ್ಸಿ ಸಿಪ್ರಾಸ್ ಶನಿವಾರವೂ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.
Advertisement