
ಬೆಂಗಳೂರು: ಭವಿಷ್ಯ ನಿಧಿ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಸಾರ್ವತ್ರಿಕ ಖಾತಾ ಸಂಖ್ಯೆ (ಯುಎಎನ್) ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತ ಕೆ.ಕೆ ಜಲನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಭವಿಷ್ಯ ನಿಧಿ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಭವಿಷ್ಯನಿಧಿ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ಸಾರ್ವತ್ರಿಕ ಖಾತಾ ಸಂಖ್ಯೆ ಕಡ್ಡಾಯಗೊಳಿಸಲಾಗುವುದು. ಈ ಮೂಲಕ ಆಗುವಂತಹ ಅವ್ಯವಹಾರವನ್ನು ತಡೆಯಬಹುದು. ಅಲ್ಲದೇ, ಕಾರ್ಮಿಕರು ಒಂದು ಸಂಸ್ಥೆಯನ್ನು ಬಿಟ್ಟು ಮತ್ತೊಂದು ಸಂಸ್ಥೆಗೆ ಸೇರಿದಾಗ ಭವಿಷ್ಯನಿಧಿಯ ಹೊಸ ಖಾತೆ ತೆರೆಯಬೇಕಿತ್ತು. ಕಾರ್ಮಿಕರು ಯುಎಎನ್ ಪಡೆಯುವುದರಿಂದ ಪದೇ ಪದೇ ಖಾತೆ ತೆರೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಭವಿಷ್ಯ ನಿಧಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ, ಇದನ್ನು ತಡೆಗಟ್ಟಬೇಕೆಂದರೆ, ಪ್ರತಿಯೊಬ್ಬರಿಗೂ ಯುಎಎನ್ ಸಂಖ್ಯೆ ಕಡ್ಡಾಯಗೊಳಿಸುವುದು ಅಗತ್ಯ. ಈ ಸಂಖ್ಯೆ ಮೂಲಕ ಪ್ರತಿಯೊಂದು ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ಮಾಡಿದರೆ ಆಗುವ ಅವ್ಯವಹಾರವನ್ನು ತಡೆಯಬಹುದು. ಭವಿಷ್ಯ ನಿಧಿಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಪ್ರತಿಯೊಂದು ಕೂಡ ಆನ್ ಲೈನ್ ಪ್ರಕ್ರಿಯೆಯಲ್ಲೇ ನಡೆಯಬೇಕು. ಇದರಿಂದ ಖಾತೆದಾರರ ಮಾಹಿತಿ ಸಂಗ್ರಹವಾಗಿರುತ್ತದೆ. ಒಂದು ಬಾರಿ ಅವರ ಯುಎಎನ್ ಸಂಖ್ಯೆಯನ್ನು ಆನ್ ಲೈನ್ ನಲ್ಲಿ ಹಾಕಿದಾಗ ಅವರ ಬಗ್ಗೆ ಪೂರ್ಣಮಾಹಿತಿಯನ್ನು ನೀಡುತ್ತದೆ. ಇದರಿಂದಾಗಿ ನಿಮ್ಮ ಕೆಲಸ ಕೆಲವೇ ಗಂಟೆಗಳಲ್ಲಿ ಮುಗಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಪದೇ ಪದೇ ಭವಿಷ್ಯ ನಿಧಿ ಬೇಕು ಎಂದು ಅರ್ಜಿ ಸಲ್ಲಿಸುವವರಿಗೆ ಕಡಿವಾಣ ಹಾಕಲು ಚಿಂತಿಸಲಾಗಿದೆ. 1,3, 2 ವರ್ಷಗಳಿಗೊಮ್ಮೆ ಪಿಎಫ್ ಹಣ ಪಡೆದುಕೊಳ್ಳುವವರಿಗೆ ಕಡಿವಾಣ ಹಾಕಲಾಗುವುದು. ಖಾತೆದಾರನಿಗೆ ಅಪಘಾತವಾದರೆ, ಅಂಗವಿಕಲ ಅಥವಾ ವೃದ್ಧನಾದರೆ ಮಾತ್ರ ಪಿಎಫ್ ಹಣ ನೀಡಲಾಗುವುದು. ಆಗಾಗ ಪಡೆಯುವಂತಹ ಪಿಎಫ್ ಹಣ ನೀಡಲು ನಿರ್ಬಂಧ ಹೇರಲಾಗುವುದು. ಭವಿಷ್ಯ ನಿಧಿ ಉಳಿತಾಯ ಖಾತೆಯಲ್ಲ. ಇದೊಂದು ಮುಂದಿನ ಜೀವನದ ಬಗ್ಗೆ ರೂಪಿಸಿರುವಂತ ಯೋಜನೆ. ಈ ಹಿನ್ನಲೆಯಲ್ಲಿ ಅವರಿಗೆ ವಯಸ್ಸಾದ ಮೇಲೆ ಜೀವನೋಪಾಯಕ್ಕೆ ನೆರವಾಗಲು ಹಣ ನೀಡಲಾಗುತ್ತದೆ ಎಂದು ಕೆ.ಕೆ ಜಲನ್ ಹೇಳಿದ್ದಾರೆ.
Advertisement