ಗುಜರಾತ್, ಮಹಾರಾಷ್ಟ್ರ ಮಾದರಿ ಬೇಳೆ ದಾಸ್ತಾನಿಗೆ ಪರವಾನಗಿ ನೀಡಿ

ರಾಜ್ಯ ಸರ್ಕಾರವು ಗುಜರಾತ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮಿಲ್ಲರ್ಸ್, ಹೋಲ್‍ಸೇಲ್ ಮತ್ತು ರೀಟೈಲ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರವು ಗುಜರಾತ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮಿಲ್ಲರ್ಸ್, ಹೋಲ್‍ಸೇಲ್ ಮತ್ತು ರೀಟೈಲ್ ಮಾರಾಟಗಾರರಿಗೆ ದಾಸ್ತಾನು ಸಂಗ್ರಹ ನಿಗದಿಗೊಳಿಸಿ ಪರವಾನಗಿ ನೀಡಬೇಕು. ಪರವಾನಗಿ ನೀಡುವವರೆಗೆ ಅರ್ಜಿ ಸಲ್ಲಿಕೆಯನ್ನೇ ಪರವಾನಗಿ ಎಂದು ಪರಿಗಣಿಸಿ ವಹಿವಾಟಿಗೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ನ.6ರಿಂದ ರಾಜ್ಯಾದ್ಯಂತ ಎಪಿಎಂಸಿ ವಹಿವಾಟು ಸ್ಥಗಿತಗೊಳ್ಳಲಿದೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ರಾಜ್ಯ ಸರ್ಕಾರಕ್ಕೆ ಹೀಗೊಂದು ಎಚ್ಚರಿಕೆ ನೀಡಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಅಧ್ಯಕ್ಷ ರಾಜೇಶ್‍ಚಂದ್ರ, ಬೇಳೆ ಬೆಲೆ ಹೆಚ್ಚಳವಾಗುವ ಮುನ್ನವೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಬೆಲೆ ಹೆಚ್ಚಳಕ್ಕೆ ಸರ್ಕಾರವೇ ಹೊಣೆಯಾಗಿದೆ ಎಂದು ಹೇಳಿದರು. ತೊಗರಿ, ಉದ್ದಿನ ಬೇಳೆಗಳ ಬೆಲೆ ಹೆಚ್ಚಳ ಸಂಬಂಧ ಸರ್ಕಾರ ಎಂಎನ್‍ಸಿ (ಬಹುರಾಷ್ಟ್ರೀಯ ಕಂಪನಿ)ಗಳಿಗೆ ಒಂದು, ಸ್ಥಳೀಯ ಸಗಟುಗಾರರಿಗೆ ಒಂದು ಕಾನೂನು ಜಾರಿಗೊಳಿಸುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. 
ರಾಜ್ಯದಲ್ಲಿ ಶೇ.99ರಷ್ಟು ಮಿಲ್ಲರ್ಸ್, ಹೋಲ್‍ಸೇಲ್ ಮತ್ತು ರೀಟೈಲ್ ಮಾರಾಟಗಾರರು ಪಾರದರ್ಶಕವಾಗಿಯೇ ವ್ಯಾಪಾರ ನಡೆಸುತ್ತಿದ್ಾರೆ. 2010ರಲ್ಲಿ ಪರವಾನಗಿ ನೀಡುವಂತೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಪರವಾನಗಿ ಅವಶ್ಯಕತೆ ಇಲ್ಲ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಎಂದಿನಂತೆ ವಹಿವಾಟು ನಡೆಸಲಾಗುತ್ತಿದೆ. ಆದರೆ ಕಳೆದ ತಿಂಗಳು ಅ.17ರಂದು ಸೂಚನೆ ನೀಡಿ 19ರಂದು ಏಕಾಏಕಿ ದಾಳಿ ನಡೆಸಿ ದಾಸ್ತಾನು ಸಂಗ್ರಹವನ್ನು ವಶಪಡಿಸಿದೆ ಎಂದು ಹೇಳಿದರು. 
ರಾಜ್ಯದಲ್ಲಿ ಬೇಳೆಕಾಳುಗಳ ಕೃತಕ ಅಭಾವ ಸೃಷ್ಟಿಸಿಲ್ಲ. ಕಳೆದ ವರ್ಷ ಮತ್ತು ಈ ವರ್ಷ ಸಮರ್ಪಕವಾಗಿ ಮಳೆಯಾಗಿಲ್ಲದ ಕಾರಣ ಬೇಡಿಕೆಗೆ ಸ್ಪಂದಿಸಲಾಗುತ್ತಿಲ್ಲ. 
ರಾಜ್ಯದಲ್ಲಿ 24 ಲಕ್ಷ ಚೀಲ ಬೇಳೆ ಉತ್ಪಾದನೆಯಾಗಿದ್ದು, 38 ಲಕ್ಷ ಚೀಲ ಬೇಡಿಕೆ ಇದೆ. ಹೀಗಿದ್ದೂ ಆಮದು ಮಾಡಿಕೊಂಡಿರುವ ಬೇಳೆಯನ್ನು ಬಹುರಾಷ್ಟ್ರೀಯ ಒಡೆತನದ ಕಂಪನಿಗಳಿಗೆ ವಿತರಿಸಲಾಗಿದೆ. ಆದ್ದರಿಂದ ಅಭಾವ ಸೃಷ್ಟಿಯಾಗಿದೆ. 
ಒಂದು ವೇಳೆ ಗ್ರಾಹಕರೇ ಎಪಿಎಂಸಿಯಿಂದ ನೇರವಾಗಿ ಬೇಳೆ ಖರೀದಿಸಲು ಇಚ್ಛಿಸಿದರೆ ಇಂದಿನಿಂದಲೇ ಕೆ.ಜಿ. ಬೇಳೆಗೆ ರು.130ಕ್ಕೆ ಪ್ರತಿ ದಿನ 500 ಕೆಜೆ ಬೇಳೆ ಮಾರಾಟ ಮಾಡುವುದಾಗಿ ಹೇಳಿದರು. ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಎಂ.ಸಿ.ದಿನೇಶ್ ಮಾತನಾಡಿ, ಬೇಳೆ ದಾಸ್ತಾನು ಮಾಡಿಕೊಳ್ಳಲು ನಿಗದಿ ಮಾಡುವ ಬದಲಾಗಿ ಅಕ್ರಮ ಸಂಗ್ರಹ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಮೊದಲು ಎಂಎನ್ ಸಿಗಳಿಗೂ, ಸ್ಥಳೀಯ ವರ್ತಕರಿಗೂ ಒಂದೇ ರೀತಿಯ ಕಾನೂನು ಜಾರಿಗೆ ತರಬೇಕು. ನಂತರ ಅಕ್ರಮವಾಗಿ ಸಂಗ್ರಹ ಮಾಡಿದ್ದರೆ ದಾಳಿ ನಡೆಸಲಿ. ಇದಕ್ಕೆ ಯಾವುದೇ ಪ್ರತಿರೋಧವಿಲ್ಲ ಎಂದರು. ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಕೆ.ರವಿ, ಪ್ರಧಾನ ಕಾರ್ಯದರ್ಶಿ ಎನ್. ಪಾರ್ಥಸಾರಥಿ ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com