ನಿಗದಿಗಿಂತ ಹೆಚ್ಚು ನಗದು ವ್ಯವಹಾರ ನಡೆಸಿದರೆ ಪ್ಯಾನ್ ವಿವರ ನೀಡುವುದು ಕಡ್ಡಾಯ

ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ನಗದು ವ್ಯವಹಾರಗಳನ್ನು ನಡೆಸಿದರೆ ಪಾನ್ ಕಾರ್ಡ್ ವಿವರಗಳನ್ನು ಕಡ್ಡಾಯವಾಗಿ ನೀಡಬೇಕೆಂಬ...
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ನವದೆಹಲಿ: ಒಂದು ನಿರ್ದಿಷ್ಟ ಮಿತಿಯನ್ನು ಮೀರಿ ನಗದು ವ್ಯವಹಾರಗಳನ್ನು ನಡೆಸಿದರೆ ಪಾನ್ ಕಾರ್ಡ್ ವಿವರಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಜಾರಿಗೆ ತರಲಿದೆ.

ಈ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಕಪ್ಪು ಹಣ ಹರಿಯುವಿಕೆಯ ಮೇಲೆ ನಿಗಾ ಇಡಲು  ಮತ್ತು ನಗದು ಹಣದ ವ್ಯವಹಾರಕ್ಕೆ ಬದಲಾಗಿ ಪ್ಲಾಸ್ಟಿಕ್ ಕರೆನ್ಸಿ(ಕ್ರೆಡಿಟ್, ಡೆಬಿಟ್ ಕಾರ್ಡುಗಳು) ವ್ಯವಹಾರಕ್ಕೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ನಿರ್ದಿಷ್ಟ ಮಿತಿಗಿಂತ ಹೆಚ್ಚು ನಗದು ವ್ಯವಹಾರ ನಡೆಸಿದರೆ ಪ್ಯಾನ್ ಕಾರ್ಡು ವಿವರ ನೀಡುವ ನಿಯಮ ಸುಧಾರಿತ ಕ್ರಮವಾಗಿದ್ದು, ಇದನ್ನು ಜಾರಿಗೆ ತರುವ ಉದ್ದೇಶ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಬಲಗೊಳಿಸಲಾಗುತ್ತಿದೆ. ಅದು ಮಾಹಿತಿಗಳನ್ನು ಸ್ವೀಕರಿಸಿ ತಂತ್ರಜ್ಞಾನ ಉಪಯೋಗಿಸಿ ವಂಚನೆಗಳನ್ನು ತಡೆಗಟ್ಟಲು ವಿಶ್ಲೇಷಣಾತ್ಮಕ ಉಪಕರಣಗಳನ್ನು ಬಳಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಜೇಟ್ಲಿ ಅವರು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಪ್ಯಾನ್ ಕಾರ್ಡು ಕಡ್ಡಾಯಗೊಳಿಸುವುದರಿಂದ ನಗದು ಹಿಂತೆಗೆದುಕೊಳ್ಳುವುದು, ನಗದು ವ್ಯವಹಾರಗಳ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಬಹುದು. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದರೆ ಅದು ಕೂಡ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಆಗುತ್ತದೆ ಎಂದು ಹೇಳಿದ್ದಾರೆ.

ಈ ವರ್ಷದ ಕೇಂದ್ರ ಬಜೆಟ್ ವೇಳೆ ಹಣಕಾಸು ಸಚಿವರು, 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ನಡೆಸಿದರೆ ಕಡ್ಡಾಯವಾಗಿ ಪ್ಯಾನ್ ವಿವರ ನೀಡಬೇಕೆಂಬ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದರು. ಅಂದರೆ ನಗದು ವ್ಯವಹಾರಕ್ಕೆ ಬದಲಾಗಿ ಪ್ಲಾಸ್ಟಿಕ್ ಕರೆನ್ಸಿಗಳನ್ನು ಬಳಸುವುದನ್ನು ಪ್ರೋತ್ಸಾಹಿಸುವುದು ಸರ್ಕಾರದ ಉದ್ದೇಶ. ಇಂಟರ್ನೆಟ್  ಬ್ಯಾಂಕಿಂಗ್, ಪೇಮೆಂಟ್ ಗೇಟ್ ವೇ, ಪೇಮೆಂಟ್ ಬ್ಯಾಂಕ್ ಮತ್ತು ಇ-ಕಾಮರ್ಸ್ ಗಳ ಮೂಲಕ ವ್ಯವಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿದೆ.

ಎನ್ ಡಿಎ ಸರ್ಕಾರದ ಸುಧಾರಣಾ ಕ್ರಮಗಳ ಜಾರಿಯಲ್ಲಿ ಜಾಮ್ ಟ್ರಿನಿಟಿ ಮತ್ತು ನೇರ ನಗದು ವರ್ಗಾವಣೆ ಪ್ರಮುಖವಾದವುಗಳು. ಜಾಮ್ ಅಂದರೆ ಜನ ಧನ ಯೋಜನೆ ಬ್ಯಾಂಕ್ ಖಾತೆ ಸಂಖ್ಯೆ, ಪ್ರತಿಯೊಬ್ಬ ಭಾರತೀಯನ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ.
ಜನಧನ ಯೋಜನೆಯ  18 ಕೋಟಿ ಫಲಾನುಭವಿಗಳಿಗೆ ರುಪೆ ಕಾರ್ಡುನ್ನು ನೀಡಲಾಗಿದ್ದು, ಎಟಿಎಂ ಕಾರ್ಡುಗಳನ್ನು ಬಳಸುವಂತೆ ಕೇಂದ್ರ ಸರ್ಕಾರ ವ್ಯವಸ್ಥೆ ಅಳವಡಿಸಿದೆ. ಮುದ್ರಾ ಯೋಜನೆಯಡಿಯಲ್ಲಿ ದೇಶದ 6 ಕೋಟಿ ಕುಟುಂಬಗಳನ್ನು ತಲುಪಲು ಸರ್ಕಾರ ಉದ್ದೇಶ ಇಟ್ಟುಕೊಂಡಿದ್ದು, ಸಾಲವನ್ನು ಮುದ್ರಾ ಕ್ರೆಡಿಟ್ ಕಾರ್ಡುಗಳ ಮೂಲಕ ಎಟಿಎಂಗಳಿಂದ ಪಡೆದುಕೊಳ್ಳಬಹುದಾಗಿದೆ.

ಆದರೆ ಸರ್ಕಾರದ ಈ ಪ್ರಸ್ತಾಪಕ್ಕೆ ಹಲವರಿಂದ ವಿರೋಧ ಕೇಳಿಬರುತ್ತಿದೆ. ಅಂತರ್ಜಾಲ ವ್ಯವಸ್ಥೆ ಇಲ್ಲದಿರುವವರು, ಕಂಪ್ಯೂಟರ್ ಬಗ್ಗೆ ಜ್ಞಾನ ಇಲ್ಲದವರು ಹೇಗೆ ವ್ಯವಹಾರ ನಡೆಸಬೇಕೆಂದು ಹಲವರಿಂದ ಪ್ರಶ್ನೆ ಕೇಳಿ ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com