ತೈಲ ನಿಕ್ಷೇಪ ಹರಾಜು

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‍ಜಿಸಿ) ಮತ್ತು ಆಯಿಲ್ ಇಂಡಿಯಾ ಸಂಸ್ಥೆಗಳಿಂದ ಹಿಂಪಡೆದಿರುವ ಸಣ್ಣ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‍ಜಿಸಿ) ಮತ್ತು ಆಯಿಲ್ ಇಂಡಿಯಾ ಸಂಸ್ಥೆಗಳಿಂದ ಹಿಂಪಡೆದಿರುವ ಸಣ್ಣ ಮತ್ತು ಅತಿಸಣ್ಣ ಪ್ರಮಾಣದ 69 ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಮೂಲಕ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹೊಸದಾಗಿ ರೂಪಿಸಿರುವ ಆದಾಯ ಹಂಚಿಕೆ ಆಧಾರದ ಮೇಲೆ ಈ ನಿಕ್ಷೇಪಗಳನ್ನು ಹರಾಜು ಮಾಡು ಬುಧವಾರ ನಡೆದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿತು. ಈ ನಿಕ್ಷೇಪಗಳಲ್ಲಿ ರು.70 ಸಾವಿರ ಕೋಟಿ ಮೌಲ್ಯದ ಅನಿಲ ಮತ್ತು ತೈಲವಿರುವ ಅಂದಾಜಿದೆ.

ಸಭೆ ನಂತರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಮಾಹಿತಿ ನೀಡಿದ್ದು ಮೂರು ತಿಂಗಳಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ನಿಕ್ಷೇಪ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ
ಹಸ್ತಕ್ಷೇಪ ಮಾಡುವುದಿಲ್ಲ. ಜತೆಗೆ ಕಂಪನಿಗಳು ತೈಲ ಮತ್ತು ಅನಿಲವನ್ನು ಬಯಸಿದವರಿಗೆ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಿಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದರು.

ಒಎನ್‍ಜಿಸಿ ಮತ್ತು ಒಐಎಲ್ ಸಂಸ್ಥೆಗಳು ಆರ್ಥಿಕವಾಗಿ ಲಾಭವಲ್ಲದ ಕಾರಣಕ್ಕಾಗಿ ನಿಕ್ಷೇಪಗಳನ್ನು ಹಿಂದಿರುಗಿಸಿದ್ದವು. ತೈಲ ಮತ್ತು ಅನಿಲ ನಿಕ್ಷೇಪ ಅನ್ವೇಷಣೆಗೆ ಉತ್ತೇಜನ ನೀಡಲು ನಿಯಮಗಳನ್ನು ಸಡಿಲಿಸಲಾಗಿದೆ. ವಿವಾದಾತ್ಮಕ ಉತ್ಪಾದನಾ ಹಂಚಿಕೆ ಒಪ್ಪಂದ (ಪಿಎಸ್‍ಸಿ) ಬದಲಿಗೆ ಸರಳವಾದ ಆದಾಯ ಹಂಚಿಕೆ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ನೂತನ ನಿಮಯದಡಿ ನಿಕ್ಷೇಪ ಪಡೆದ ಕಂಪನಿಗಳು ಕಾಲಕಾಲಕ್ಕೆ ಮತ್ತು ವಿಭಿನ್ನ ದರಗಳಿದ್ದಾಗ ಸರ್ಕಾರಗಳೊಂದಿಗೆ ಹಂಚಿಕೊಳ್ಳುವ ಆದಾಯವನ್ನು ಮುಂಚಿತವಾಗಿಯೇ ತಿಳಿಸುತ್ತವೆ. ಈ ಹರಾಜು ಏಕೀಕೃತ ಪರವಾನಗಿಗೆ ರಹದಾರಿಯಾಗಿರುತ್ತದೆ.

ನಿಕ್ಷೇಪ ಪಡೆದವರಿಗೆ ನೈಸರ್ಗಿಕ ಮಾತ್ರವಲ್ಲದೆ ಅಸಾಂಪ್ರದಾಯಿಕ ಶೇಲ್ ಮತ್ತು ಕೋಲ್‍ಬೆಡ್‍ಮಿಥೇನ್ (ಸಿಬಿಎಂ)ನಿಂದಲೂ ತೈಲ ಮತ್ತು ಅನಿಲ ಉತ್ಪಾದಿಸುವ ಹಕ್ಕು ನೀಡಲಾಗುತ್ತದೆ ಎಂದು ಪ್ರಧಾನ್ ವಿವರಿಸಿದರು.

ಒಎನ್‍ಜಿಸಿ 110 ಸಣ್ಣ ಮತ್ತು ಅತಿಸಣ್ಣ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಅನ್ವೇಷಿಸಿದ್ದು ಈ ಪೈಕಿ 47 ನಿಕ್ಷೇಪಗಳನ್ನು ಮಾತ್ರ ಉಳಿಸಿಕೊಂಡು ಉಳಿದ 63 ನಿಕ್ಷೇಪಗಳನ್ನು ಹಿಂತಿರುಗಿಸಿದೆ. ಆರು ನಿಕ್ಷೇಪ ಅನ್ವೇಷಿಸಿರುವ ಒಐಎಲ್ ಎಲ್ಲವನ್ನೂ ಹಿಂತಿರುಗಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com