
ನವದೆಹಲಿ: ಜಾಗತಿಕ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 8ರ ಮಂಗಳವಾರ ದೇಶದ ಉದ್ಯಮಿಗಳೊಂದಿಗೆ ಸಭೆ ಕರೆದಿದ್ದಾರೆ ಎನ್ನಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ, ಟಾಟಾ ಗ್ರೂಪ್‍ನ ಸಿಎಂಡಿ ಸೈರಸ್ ಮಿಸ್ತ್ರಿ ಸೇರಿದಂತೆ ಹಲವು ದೊಡ್ಡ ಉದ್ಯಮಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದ ಉದ್ಯಮ ಒಕ್ಕೂಟಗಳಾದ ಸಿಐಐ ಮತ್ತು ಎಫ್ಕೆಸಿಸಿಐ ಪ್ರತಿನಿಧಿಗಳು ಸಹ ಪಾಲ್ಗೊಳ್ಳಲಿದ್ದಾರೆ.
ಪ್ರಧಾನ ಮಂತ್ರಿಗಳ ಗೃಹ ಕಚೇರಿಯಲ್ಲಿ ಸಭೆ ನಡೆಯಲಿದೆ. ಜಾಗತಿಕ ಆರ್ಥಿಕತೆ ಹಿನ್ನಡೆಯಲ್ಲಿವುದರಿಂದ ಅದರಲ್ಲೂ ಚೀನಾ ಪ್ರಗತಿ ಕುಸಿಯುತ್ತಿರುವುದು ಭಾರತಕ್ಕೆ ಹೇಗೆ ಅವಕಾಶವಾಗಲಿದೆ ಎಂಬುದು ಚರ್ಚೆಯ ಪ್ರಮುಖ ವಿಷಯವಾಗಿದೆ ಎಂದು ಈ ಬೆಳವಣಿಗೆಗಳ ಕುರಿತು ಮಾಹಿತಿ ಹೊಂದಿರುವ ಮೂಲಗಳು ತಿಳಿಸಿವೆ.
ದೇಶದ ಆರ್ಥಿಕತೆಯನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಬ್ಯಾಂಕರ್‍ಗಳು ಮತ್ತು ಜಾಗತಿಕ ಆರ್ಥಿಕ ತಜ್ಞರೊಂದಿಗೆ ಮಾತುಕತೆಗಳಲ್ಲಿ ನಿರತರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಷೇರು ಮಾರುಕಟ್ಟೆಗಳು ಇತ್ತೀಚೆಗೆ ಕುಸಿದ ಹಿನ್ನೆಲೆಯಲ್ಲಿ ದೇಶದ ಷೇರು ಪೇಟೆಯೂ ಭಾರಿ ಹಿನ್ನಡೆ ಕಂಡಿತ್ತು. ಬೆಳಗ್ಗೆ ಸಭೆ ನಡೆಯಲಿದ್ದು ಅರುಣ್ ಜೇಟ್ಲಿ ಪ್ರಸ್ತಾವಿಕವಾಗಿ ಮಾತನಾಡುವ ಮೂಲಕ ಸಭೆಗೆ ಚಾಲನೆ ನೀಡಲಿದ್ದಾರೆ.
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಪ್ರಸಕ್ತ ಪರಿಸ್ಥಿತಿ ಕುರಿತು ಮಂಡಿಸುವ ಸಾಧ್ಯತೆಗಳಿವೆ. ಸುಮಾರು 20ರಿಂದ 25 ಉದ್ಯಮಿಗಳಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಲಾಗುವುದು. ಧಾನ ಮಂತ್ರಿಗಳ ಮಾತನಾಡುವ ಮೂಲಕ ಸಭೆ ಕೊನೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಅಧಿವೇಶನ ಈ ವಾರ ನಿರ್ಧಾರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯಲು ವಿಸ್ತರಿಸಿದ ಸಂಸತ್ತಿನ ಕಲಾಪ ಕರೆಯುವ ಕುರಿತು ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಈ ಕುರಿತು ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ಪೂರ್ಣಗೊಂಡ ನಂತರವೇ ಕರೆಯಲಾಗುವುದು ಎಂದಿದ್ದಾರೆ. ವಿವಿಧ ಪಕ್ಷಗಳ ಪ್ರಮುಖ ಮುಖಂಡರೊಂದಿಗೆ ಈಗಾಗಲೆ ಮಾತುಕತೆ ನಡೆಸಿದ್ದೇನೆ. ಇನ್ನೆರಡು 3 ದಿನಗಳಲ್ಲಿ ಉಳಿದವರೊಂದಿಗೆ ಮಾತುಕತೆ ಪೂರ್ಣಗೊಳಿಸಲಾಗುವುದು.
ಈ ಪ್ರಕ್ರಿಯೆ ಮುಗಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಜಿಎಸ್‍ಟಿ ಜಾರಿಗೊಳಿಸುವ ಅಗತ್ಯವಿದೆ. ಈ ಮಸೂದೆ ಜಾರಿಗೆ ಸಹಕರಿಸಬೇಕೆಂದು ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಮನವಿ ಮಾಡಿದರು.
Advertisement