
ನವದೆಹಲಿ: ಆರ್ ಬಿಐ ನ ಹೊಸ ಹಣಕಾಸು ನೀತಿ ಪ್ರಕಟವಾಗುವ ಮುನ್ನಾ ದಿನ ಬಡ್ಡಿ ದರಗಳ ಬಗ್ಗೆ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ, ಬಡ್ಡಿ ದರ ಕಡಿತಗೊಳಿಸುವಂತೆ ಸಲಹೆ ನೀಡಿದ್ದಾರೆ.
ಸಿಐಐ ನ ವಾರ್ಷಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಅರುಣ್ ಜೇಟ್ಲಿ, ಹೆಚ್ಚಿನ ಬಡ್ಡಿ ದರ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಬದ್ಧವಾಗಿದೆ. ಅಂತೆಯೇ ಹಣದುಬ್ಬರ ನಿಯಂತ್ರಣದಲ್ಲಿದ್ದು ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ದರ ನಿಗದಿಪಡಿಸಲು ಸಾಧ್ಯವಿದೆ ಎಂದಿದ್ದಾರೆ.
ಬಡ್ಡಿ ದರ ಸೇರಿದಂತೆ ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ದೇಶದಲ್ಲಿ ಹೆಚ್ಚಿನ ಚರ್ಚೆ ನಡೆಯಬೇಕು, ಕೆಲವು ರಾಜಕೀಯ ಗುಂಪುಗಳು ಹೆಚ್ಚಿನ ಬಡ್ಡಿ ದರವನ್ನು ಬೆಂಬಲಿಸುತ್ತಿವೆ. ಹೆಚ್ಚಿನ ಬಡ್ಡಿ ದರ ಆರ್ಥಿಕ ಜಡತ್ವಕ್ಕೆ ಕಾರಣವಾಗಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಹಲವು ಸವಾಲುಗಳಿವೆ, ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಚರ್ಚೆ ಸರಿಯಾದ ದಿಕ್ಕಿನಲ್ಲಿ ನಡೆಸುವುದು ಅತಿ ದೊಡ್ಡ ಸವಾಲು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಆರ್ ಬಿಐ 2016-17 ನೇ ವರ್ಷದ ಪ್ರಥಮ ಹಣಕಾಸು ನೀತಿಯನ್ನು ಪ್ರಕಟ ಮಾಡಲಿದ್ದು ಬಡ್ಡಿ ದರ ಇಳಿಕೆ ಮಾಡುವ ಬಗ್ಗೆ ನಿರೀಕ್ಷೆಗಳಿವೆ.
Advertisement