ನನ್ನ ವಿರುದ್ಧದ ವಾಗ್ದಾಳಿಗಳು ಅಸಹ್ಯಕರ, ಹುದ್ದೆ ವಿಸ್ತರಣೆ ಬಗ್ಗೆ ಮುಕ್ತವಾಗಿದ್ದೆ: ರಘುರಾಮ್ ರಾಜನ್

ತಮ್ಮ ವಿರುದ್ಧದ ರಾಜಕೀಯ ಪ್ರೇರಿತ ವಾಗ್ದಾಳಿಗಳು ಅಸಹ್ಯಕರ ಎಂದು ಹೇಳಿರುವ ಆರ್ ಬಿ ಐ ಗೌರ್ನರ್, ಆರ್ ಬಿಐ ನಲ್ಲಿ ಬಾಕಿ ಇದ್ದ ಕೆಲಸಗಳನ್ನು ಮುಕ್ತಾಯಗೊಳಿಸಲು ಹುದ್ದೆಯಲ್ಲೇ ಮುಂದುವರೆಯುವ ವಿಚಾರಕ್ಕೆ ಮುಕ್ತನಾಗಿದ್ದೆ
ರಘುರಾಮ್ ರಾಜನ್
ರಘುರಾಮ್ ರಾಜನ್

ನವದೆಹಲಿ: ತಮ್ಮ ವಿರುದ್ಧದ ರಾಜಕೀಯ ಪ್ರೇರಿತ ವಾಗ್ದಾಳಿಗಳು ಅಸಹ್ಯಕರ ಎಂದು ಹೇಳಿರುವ ಆರ್ ಬಿ ಐ ಗೌರ್ನರ್ ರಘುರಾಮ್ ರಾಜನ್, ಆರ್ ಬಿಐ ನಲ್ಲಿ ಬಾಕಿ ಇದ್ದ ಕೆಲಸಗಳನ್ನು ಮುಕ್ತಾಯಗೊಳಿಸಲು ಹುದ್ದೆಯಲ್ಲೇ ಮುಂದುವರೆಯುವ ವಿಚಾರಕ್ಕೆ ಮುಕ್ತನಾಗಿದ್ದೆ ಎಂದು ಹೇಳಿದ್ದಾರೆ.
ಸಂತಸದಿಂದಲೇ ಆರ್ ಬಿಐ ಗೌರ್ನರ್ ಹುದ್ದೆಯಿಂದ ನಿರ್ಗಮಿಸುತ್ತಿರುವುದಾಗಿ ತಿಳಿಸಿರುವ ರಘುರಾಮ್ ರಾಜನ್, ತಾವು ಹುದ್ದೆಯಲ್ಲೇ ಮುಂದುವರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ನಿರ್ದಿಷ್ಟ ಹಂತಕ್ಕೆ ತಲುಪಲಿಲ್ಲ ಎಂದಿದ್ದಾರೆ. ಆರ್ ಬಿ ಐ ಗೌರ್ನರ್ ಹುದ್ದೆಯಲ್ಲೇ ಮುಂದುವರೆಯುವುದರ ಬಗ್ಗೆ ಅಥವಾ ಸರ್ಕಾರದಲ್ಲಿ ತಮ್ಮ ಭವಿಷ್ಯದ ಬಗ್ಗೆ ತಾವೆಂದೂ ಚಿಂತಿಸಿಲ್ಲ, ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದಾಗಿ ರಘುರಾಮ್ ರಾಜನ್ ಹೇಳಿದ್ದಾರೆ.
ವಿಶ್ವವಿದ್ಯಾನಿಲಯದ ಅನುಭವಗಳೇ ನನ್ನನ್ನು ದಪ್ಪ ಚರ್ಮದವನನ್ನಾಗಿಸಿವೆ, ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ವಿರುದ್ಧ ನಡೆದ ಆಧಾರ ರಹಿತ ಆರೋಪಗಳು ಹಾಗೂ ವಾಗ್ದಾಳಿಗಳು ಅಸಹ್ಯಕರ, ಆದರೂ ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ರಘುರಾಮ್ ರಾಜನ್. 
ಎರಡನೇ ಅವಧಿಯಲ್ಲಿ ಮುಂದುವರೆಯುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜನ್,  ಕಳೆದ ಮೂರು ವರ್ಷದ ಅವಧಿಯಲ್ಲಿ ತಮ್ಮ ಎಲ್ಲಾ  ಉಪಕ್ರಮಗಳನ್ನು ರಚಿಸಿದ್ದೆಯಾದರೂ, ಪಿಎಸ್ ಯು ಬಾಂಕ್ ನ ಬ್ಯಾಲೆನ್ಸ್ ಶೀಟ್ ಕ್ಲಿನ್ ಅಪ್, ಹಣಕಾಸು ನೀತಿ ಸಮಿತಿ ಚೌಕಟ್ಟನ್ನು ರಚನೆ ಮಾಡುವುದು ಸೇರಿದಂತೆ ಕೆಲವು ಕೆಲಸಗಳು ಬಾಕಿ ಇತ್ತು ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. ರಘುರಾಮ್ ರಾಜನ್ ವಿರುದ್ಧ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com