ಮುಂಬೈ: ಟಾಟಾ ಸನ್ಸ್ ನ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ಟ್ರಿ ಅವರನ್ನು ಟಾಟಾ ಮಂಡಳಿಯಿಂದ ತೆಗೆದುಹಾಕಬೇಕೆಂದು ಟಾಟಾ ಗ್ರೂಪ್ ನ ಅನೇಕ ಕಂಪೆನಿಗಳು ಸಾಮಾನ್ಯ ಸಭೆಗಿಂತ ಮುನ್ನ ಒತ್ತಾಯಿಸುತ್ತಿರುವ ಸಂದರ್ಭದಲ್ಲಿ, ಮಿಸ್ಟ್ರಿಯವರು ಕಂಪೆನಿಯ ಮಧ್ಯಸ್ಥಗಾರರ ಬೆಂಬಲ ಕೋರಿದ್ದಾರೆ. ಮಂಡಳಿಯು ಯಾರೊಬ್ಬರ ಸ್ವಂತ ಅಧಿಕಾರ ಕ್ಷೇತ್ರವಲ್ಲ ಎಂದು ಅವರು ಹೇಳಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.
ಟಾಟಾ ಗ್ರೂಪ್ ಯಾರೊಬ್ಬರ ಸ್ವಂತ ಮತ್ತು ವೈಯಕ್ತಿಕ ಅಧಿಕಾರ ಕ್ಷೇತ್ರವಲ್ಲ, ಇದು ಯಾರೋ ಒಬ್ಬರಿಗೆ ಮಾತ್ರ ಸೇರಿದ್ದಲ್ಲ, ಟಾಟಾ ಟ್ರಸ್ಟ್ ನ ಟ್ರಸ್ಟಿಗಳಿಗಾಗಲಿ, ಟಾಟಾ ಸನ್ಸ್ ನ ನಿರ್ದೇಶಕರಿಗಾಗಲಿ ಮತ್ತು ಕಾರ್ಯನಿರ್ವಹಣಾ ಕಂಪೆನಿಗಳ ನಿರ್ದೇಶಕರಿಗೆ ಸೇರಿದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಟಾಟಾ ಸನ್ಸ್ ಎಲ್ಲಾ ಮಧ್ಯಸ್ಥಿಕೆದಾರರಿಗೆ ಸೇರಿದ್ದು, ಅದರಲ್ಲಿ ನೀವು ಕೂಡ ಭಾಗಿಯಾಗಿದ್ದೀರಿ. ಆದುದರಿಂದ ನೀವೆಲ್ಲರೂ ಇಲ್ಲಿಂದ ಬಿಟ್ಟು ಮುಂದಕ್ಕೆ ಯೋಚಿಸಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ಧ್ವನಿ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಕೇಳಬೇಕಾಗಿದೆ. ಭವಿಷ್ಯದ ಬಗ್ಗೆ ವ್ಯಾಖ್ಯಾನ ಕೊಡುವವರಾಗಬೇಕು ನೀವು ಎಂದು ಕಂಪೆನಿಯ ಷೇರುದಾರರಿಗೆ ಬರೆದ ಬಹಿರಂಗ ಪತ್ರದಲ್ಲಿ ಮಿಸ್ಟ್ರಿ ಒತ್ತಾಯಿಸಿದ್ದಾರೆ.
ಆದರೆ ಟಾಟಾ ಸನ್ಸ್ ಮಿಸ್ಟ್ರಿಯವರ ಆರೋಪವನ್ನು ತಳ್ಳಿಹಾಕಿದ್ದು, ಅವರು ಬಹಿರಂಗಪಡಿಸಿದ ಪತ್ರ ಅವರ ಹಳೆ ಹೇಳಿಕೆ, ಪತ್ರಿಕಾ ವರದಿಗಳು ಮತ್ತು ಸೋರಿಕೆಯ ಹೊಸ ಆವೃತಿಯಷ್ಟೆ ಎಂದು ಹೇಳಿದೆ.
ಖಂಡಿತವಾಗಿಯೂ ಟಾಟಾ ಸನ್ಸ್ ಯಾರೊಬ್ಬರ ಖಾಸಗಿ ಅಧಿಕಾರ ಕ್ಷೇತ್ರವಲ್ಲ. ಅಧ್ಯಕ್ಷರಾದ ನಂತರ ಮಿಸ್ಟ್ರಿಯವರೇ ಟಾಟಾ ಸನ್ಸ್ ನ್ನು ತಮ್ಮ ವೈಯಕ್ತಿಕ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ತಮ್ಮ ಏಕಪಕ್ಷೀಯ ಕ್ರಮಗಳಿಂದ ಟಾಟಾ ಗ್ರೂಪ್ ನ ಅಮೂಲ್ಯ ಸಾಂಸ್ಥಿಕ ಸಂಸ್ಥೆಯನ್ನು ನಾಶ ಮಾಡಲು ಹೊರಟರು ಎಂದು ಟಾಟಾ ಸನ್ಸ್ ಹೇಳಿಕೆಯಲ್ಲಿ ತಿರುಗೇಟು ನೀಡಿದೆ.