ಮುಂಬೈ: ಬಡ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ನೀಡುವ ಸಾಲದ ಮೇಲಿನ ಬಡ್ಡಿದರಗಳಿಗೆ ಆದ್ಯತೆ ನೀಡಬೇಕೆಂದು ಪ್ರಧಾನ ಮಂತ್ರಿ ಹೊಸ ವರ್ಷ ಮುನ್ನಾದಿನ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕರೆ ನೀಡಿದ ಕೂಡಲೇ, ಭಾರತದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯಾಗಿ ಸಾಲದ ಮೇಲಿನ ಬಡ್ಡಿದರಗಳನ್ನು ಶೇಕಡಾ 0.9ರಷ್ಟು ಕಡಿತಗೊಳಿಸಿದೆ.
ಈ ನಡೆಯನ್ನು ಇತರ ಬ್ಯಾಂಕುಗಳು ಕೂಡ ಸದ್ಯದಲ್ಲಿಯೇ ಅನುಸರಿಸುವ ನಿರೀಕ್ಷೆಯಿದೆ.
ನೂತನ ಬಡ್ಡಿದರ ಇಳಿಮುಖ ಇಂದಿನಿಂದಲೇ ಜಾರಿಗೆ ಬಂದಿದೆ.
ಇದರಿಂದಾಗಿ ಹಣ ಆಧಾರಿತ ಸಾಲ ಪ್ರಮಾಣದ ಕನಿಷ್ಟ ವೆಚ್ಚ(ಎಂಸಿಎಲ್ ಆರ್)ಒಂದು ವರ್ಷದ ಅವಧಿಗೆ ಶೇಕಡಾ 8.90ಯಿಂದ ಶೇಕಡಾ 8ಕ್ಕೆ ಕಡಿತವಾಗಿದೆ. ಮೂರು ವರ್ಷಗಳ ಸಾಲದ ಮೇಲಿನ ಬಡ್ಡಿದರ ಶೇಕಡಾ 9.05ರಿಂದ ಶೇಕಡಾ 8.15ಕ್ಕೆ ತಗ್ಗಿದೆ.ಎರಡು ವರ್ಷಗಳ ಅವಧಿಗೆ ಶೇಕಡಾ 8.10ರಷ್ಟು ತಗ್ಗಿಸಲಾಗಿದೆ.ಇತರ ಎಲ್ಲಾ ಮೆಚ್ಯುರಿಟಿಗಳ ಸಾಲದ ದರಗಳು ಕೂಡ ಕಡಿತವಾಗಿವೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ನಿನ್ನೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ದೇಶದ ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದ ಜನರನ್ನು ಗಮದಲ್ಲಿಟ್ಟುಕೊಳ್ಳುವಂತೆ ಬ್ಯಾಂಕ್ ಗಳಿಗೆ ಕರೆ ನೀಡಿದ್ದರು.
ಹೊಸ ಬಡ್ಡಿದರದ ಅನ್ವಯ ಹಳೆಯ 500, 1000 ನೋಟುಗಳ ಚಲಾವಣೆ ನಿಂತ ಬಳಿಕ ಒಂದು ತಿಂಗಳು, ಮೂರು ತಿಂಗಳು ಮತ್ತು 6 ತಿಂಗಳ ಬಡ್ಡಿದರವನ್ನು ಶೇಕಡಾ 0.9ರಷ್ಟು ತಗ್ಗಿಸಲಾಗಿದೆ.
ಕಳೆದ ವಾರ ಸ್ಟೇಟ್ ಬ್ಯಾಂಕ್ ಆಫ್ ಟ್ರವಂಕೂರು ಹಾಗೂ ಐಡಿಬಿಐ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 0.6ರಷ್ಟು ತಗ್ಗಿಸಿತ್ತು.