ಸಾಲ ವಸೂಲಿಗೆ ಕಿಂಗ್ ಫಿಶರ್ ಆಸ್ತಿ ಮಾರಾಟಕ್ಕೆ ಮುಂದಾದ ಬ್ಯಾಂಕುಗಳು

ಮದ್ಯ ದೊರೆ ವಿಜಯ್ ಮಲ್ಯ ಅವರಿಂದ ಸುಮಾರು 6 ಸಾವಿರದ 963 ಕೋಟಿ ರೂಪಾಯಿ ಸಾಲವನ್ನು ವಸೂಲು ಮಾಡಲು ಸ್ಟೇಟ್ ಬ್ಯಾಂಕ್...
ಮದ್ಯ ದೊರೆ ವಿಜಯ್ ಮಲ್ಯ
ಮದ್ಯ ದೊರೆ ವಿಜಯ್ ಮಲ್ಯ

ಬೆಂಗಳೂರು: ಮದ್ಯ ದೊರೆ ವಿಜಯ್ ಮಲ್ಯ ಅವರಿಂದ ಸುಮಾರು 6 ಸಾವಿರದ 963 ಕೋಟಿ ರೂಪಾಯಿ ಸಾಲವನ್ನು ವಸೂಲು ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕುಗಳ ಒಕ್ಕೂಟವು ಹರಸಾಹಸ ಮಾಡುತ್ತಿವೆ.

ಒಂದು ಬ್ಯಾಂಕಿನಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಅನೇಕ ಬ್ಯಾಂಕುಗಳಿಗೆ ಅನುತ್ಪಾದಕ ಸ್ವತ್ತುಗಳು ಭಾರೀ ಮೊತ್ತದಲ್ಲಿ ಹೇರಿಕೆಯಾಗಿದ್ದು, ಯಾವುದನ್ನು ವಸೂಲು ಮಾಡಿಕೊಳ್ಳಲು ಸಾಧ್ಯವೋ ಅವುಗಳನ್ನು ಮಾಡಲು ಪ್ರಯತ್ನಪಡುತ್ತಿವೆ. ತಾವು ನೀಡಿರುವ ಸಾಲವನ್ನು ವಸೂಲು ಮಾಡಿಕೊಳ್ಳಲು ಕಿಂಗ್ ಫಿಶರ್ ಏರ್ ಲೈನ್ಸ್ ನ್ನು ಆಸ್ತಿ ಪುನರ್ನಿರ್ಮಾಣ ಕಂಪೆನಿ(ಎಆರ್ ಸಿ)ಗೆ ಮಾರಾಟ ಮಾಡಲು ನಾಲ್ಕು ಬ್ಯಾಂಕುಗಳು ಮುಂದಾಗಿವೆ.
ಮೂರ್ನಾಲ್ಕು ಬ್ಯಾಂಕುಗಳು ಆಸ್ತಿ ಪುನರ್ನಿರ್ಮಾಣ ಕಂಪೆನಿಗಳಿಗೆ ಹೂಡಿಕೆ ಪಾಲಿನ ಮಾರಾಟ ಮಾಡಲು ನಿರ್ಧರಿಸಿದ್ದು, ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಸ್ವಲ್ಪವಾದರೂ ಹಣ ಬರಬಹುದು ಎಂಬ ನಿರ್ಧಾರಕ್ಕೆ ಬಂದಿವೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕುಗಳು ಕೆಲವು ಕಂಪೆನಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸುತ್ತಿವೆ.

ಕಿಂಗ್ ಫಿಶರ್ ಏರ್ ಲೈನ್ಸ್ ಮತ್ತು ಯುನೈಟೆಡ್ ಬ್ರೀವರೀಸ್ ಮಾಲೀಕ ವಿಜಯ್ ಮಲ್ಯ ಬೇಕೆಂದೇ ಬ್ಯಾಂಕಿನಲ್ಲಿ ಸಾಲ ಇಟ್ಟುಕೊಂಡಿದ್ದಾರೆ(wilful defaulters) ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಳೆದ ವಾರ ಆರೋಪಿಸಿತ್ತು. ಹೀಗೆ ವಿಜಯ್ ಮಲ್ಯ ಅವರನ್ನು  ಆರೋಪಿಸುತ್ತಿರುವ ಮೂರನೇ ಸಾರ್ವಜನಿಕ ವಲಯದ ಬ್ಯಾಂಕ್ ಇದಾಗಿದೆ.
ಆರ್ ಬಿಐ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯನ್ನು ಬೇಕೆಂದೇ ಸಾಲ ಬಾಕಿ ಇಟ್ಟಿರುವವರು ಎಂದು ಘೋಷಣೆ ಮಾಡಿದ ನಂತರ ಬ್ಯಾಂಕುಗಳಿಂದ ಆ ವ್ಯಕ್ತಿಗೆ ಬೇರೆ ಸಾಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ.
 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾವಿರದ 600 ಕೋಟಿ ರೂಪಾಯಿ ಸಾಲವನ್ನು ವಿಜಯ್ ಮಲ್ಯ ಅವರಿಗೆ ನೀಡಿದೆ. ಇನ್ನು ಉಳಿದ ಬ್ಯಾಂಕುಗಳಾದ ಪಂಜಾಬ್ ನ್ಯಾಶನಲ್ ಬ್ಯಾಂಕು ಮತ್ತು ಐಡಿಬಿಐ ತಲಾ 800 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ, ಬ್ಯಾಂಕ್ ಆಫ್ ಬರೋಡ 550 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 410 ಕೋಟಿ, ಯುಕೋ ಬ್ಯಾಂಕ್ 320 ಕೋಟಿ, ಕಾರ್ಪೊರೇಷನ್ ಬ್ಯಾಂಕ್ 310 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 150 ಕೋಟಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ 140 ಕೋಟಿ, ಫೆಡರಲ್ ಬ್ಯಾಂಕ್ 90 ಕೋಟಿ, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 60 ಕೋಟಿ ಹಾಗೂ ಆಕ್ಸಿಸ್ ಬ್ಯಾಂಕ್ ಗಳಲ್ಲಿ 50 ಕೋಟಿ ರೂಪಾಯಿ ಸಾಲ ವಿಜಯ್ ಮಲ್ಯ ಹೆಗಲ ಮೇಲಿದೆ.

ಮುಂಬೈಯಲ್ಲಿರುವ ಕಿಂಗ್ ಫಿಶರ್ ಮನೆಯನ್ನು ಮುಂದಿನ ತಿಂಗಳು ಹರಾಜು ಹಾಕಲು ಬ್ಯಾಂಕುಗಳ ಒಕ್ಕೂಟ ನಿರ್ಧರಿಸಿದೆ. ಆಸ್ತಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಎಸ್ ಬಿಐ ಕ್ಯಾಪ್ ಟ್ರಸ್ಟಿ ಕಂಪೆನಿ ಲಿಮಿಟೆಡ್ ಮಾರ್ಚ್ 17ರಂದು 2 ಸಾವಿರದ 401.70 ಚದರಡಿ ಅಳತೆಯ ಆಸ್ತಿಯನ್ನು ಇ ಹರಾಜು ಹಾಕಲಿದೆ. ಆಸ್ತಿಯ ಮುಂಗಡ ಬೆಲೆ 150 ಕೋಟಿ ರೂಪಾಯಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com