ನವದೆಹಲಿ: ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಪಟ್ಟ ಲಾಭಗಳನ್ನು ಪಡೆದುಕೊಳ್ಳಲು(ಐಪಿಆರ್) ವ್ಯಾಪಾರ ನಡೆಸಲು ಅನುಕೂಲವಾಗಲು ನವೋದ್ಯಮಿಗಳು(ಸ್ಟಾರ್ಟ್ ಅಪ್) ಸರ್ಕಾರದಿಂದ ಮನ್ನಣೆ ಪ್ರಮಾಣಪತ್ರವನ್ನು ಸರ್ಕಾರದಿಂದ ಪಡೆದುಕೊಂಡರೆ ಸಾಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಮೊದಲು ಐಪಿಆರ್ ಪ್ರಯೋಜನಗಳನ್ನು ಪಡೆದುಕೊಳ್ಳಲು ಹೊಸದಾಗಿ ಉದ್ಯಮ ಪ್ರಾರಂಭಿಸುವವರು ಆಂತರಿಕ ಸಚಿವಾಲಯ ಮಂಡಳಿಯನ್ನು ಭೇಟಿ ಮಾಡಿ ವಿಸ್ತಾರವಾದ ಪ್ರಕ್ರಿಯೆಗೆ ಒಳಗಾಗಬೇಕಾಗಿತ್ತು. ಆದರೆ ಇನ್ನು ಮುಂದೆ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆಯಿಂದ ಮನ್ನಣೆ ಪ್ರಮಾಣಪತ್ರ ಪಡೆದುಕೊಂಡರೆ ಸಾಕು ಎಂದು ಅವರು ಸ್ಟಾರ್ಟ್ ಅಪ್ ಭಾರತ ಸಮ್ಮೇಳನದಲ್ಲಿ ಹೇಳಿದರು.
ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯ ಯೋಜನೆಯಲ್ಲಿ ಸರ್ಕಾರ ಮೂರು ವರ್ಷಗಳ ತೆರಿಗೆ ರಜೆ ಹಾಗೂ ಇತರ ಉಪಯೋಗಗಳನ್ನು ಉದ್ಯಮಿಗಳಿಗೆ ಘೋಷಿಸಿದೆ.
ಸಂಶೋಧನೆ ಪಾರ್ಕಿಗೆ 7 ಪ್ರಸ್ತಾವನೆಗಳು, 16 ತಂತ್ರಜ್ಞಾನ ಉದ್ಯಮ ಇನ್ಕ್ಯುಬೇಟರ್ ಗಳಿಗೆ ಮತ್ತು 13 ಸ್ಟಾರ್ಟ್ ಅಪ್ ಪ್ರಸ್ತಾವನೆಗಳಿಗೆ ರಾಷ್ಟ್ರೀಯ ತಜ್ಞರ ಸಲಹಾ ಸಮಿತಿ ನೀಡಿರುವ ಶಿಫಾರಸುಗಳನ್ನು ಈ ವರ್ಷದ ಹಣಕಾಸು ವರ್ಷದಲ್ಲಿ ಜಾರಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.