ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್) ಹಣ ಪಡೆಯಲು ನಿರ್ಧರಿಸಿದರೆ, ಆ ಪೈಕಿ ಶೇ. 60 ರಷ್ಟು ಮೊತ್ತಕ್ಕೆ ತೆರಿಗೆ ಕಟ್ಟಬೇಕು ಎಂಬ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮುಂಗಡ ಪತ್ರದ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ವಿತ್ತ ಸಚಿವರಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮೋದಿಯವರು ಶನಿವಾರ ಜೇಟ್ಲಿಯವರಲ್ಲಿ ಮಾತನಾಡಿದ್ದು, ನೌಕರರ ಭವಿಷ್ಯ ನಿಧಿ ನಗದೀಕರಣದ ಮೇಲಿನ ತೆರಿಗೆ ಕುರಿತ ಪ್ರಸ್ತಾವನೆಯನ್ನು ಪುನರ್ ವಿಮರ್ಶೆಗೊಳಪಡಿಸಬೇಕು ಎಂದು ಹೇಳಿರುವುದಾಗಿ ಬಲ್ಲಮೂಲಗಳು ಹೇಳಿವೆ.
ಏಪ್ರಿಲ್ 1 ರಿಂದ ಇಪಿಎಫ್ ಕಟ್ಟುವ ಹಣಕ್ಕೆ ಇದು ಅನ್ವಯವಾಗುತ್ತದೆ ಎಂದು ಜೇಟ್ಲಿ ಹೇಳಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮರುಪರಿಶೀಲನೆ ನಡೆಸುವಂತೆ ಮೋದಿ ಸೂಚಿಸಿದ್ದಾರೆ.
ಮರುಪರಿಶೀಲನೆ ಬಗ್ಗೆ ವಿತ್ತ ಸಚಿವರು ಶುಕ್ರವಾರ ಸಂಸತ್‌ನಲ್ಲಿ ಹೇಳಿಕೆ ನೀಡಬೇಕಿತ್ತು. ಆದರೆ ಮಾಜಿ ಸ್ಪೀಕರ್ ಪಿಎ ಸಂಗ್ಮಾ ನಿಧನರಾದ ಕಾರಣ ಸಂಸತ್ ಕಲಾಪವನ್ನು ಮುಂದೂಡಲಾಗಿತ್ತು.
ಮಂಗಳವಾರಕ್ಕಿಂತ ಮುನ್ನ ಸರ್ಕಾರ ನೌಕರರ ಭವಿಷ್ಯ ನಿಧಿ ಬಗ್ಗೆ ಪುನರ್‌ಪರಿಶೀಲನೆ ನಡೆಸಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.