ಕೈಗಾರಿಕಾ ಪ್ರಗತಿಯಲ್ಲಿ ಕುಸಿತ, ಚಿಲ್ಲರೆ ಹಣದುಬ್ಬರದಲ್ಲಿ ಶೇ 5.39ರಷ್ಟು ಏರಿಕೆ

ಮಾರ್ಚ್‌ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕದ (ಐಐಪಿ) ಮೇಲೆ ಲೆಕ್ಕಹಾಕುವ ದೇಶದ ಕೈಗಾರಿಕಾ ಪ್ರಗತಿಯು ಶೇ.0.1ರಷ್ಟು ಕುಸಿತ ಕಂಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ:  ಮಾರ್ಚ್‌ ತಿಂಗಳಿನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕದ  (ಐಐಪಿ) ಮೇಲೆ ಲೆಕ್ಕಹಾಕುವ ದೇಶದ ಕೈಗಾರಿಕಾ ಪ್ರಗತಿಯು ಶೇ.0.1ರಷ್ಟು  ಕುಸಿತ ಕಂಡಿದೆ.  ಅದೇ ವೇಳೆ  ಆಹಾರ ಧಾನ್ಯಗಳ ಬೆಲೆ ಹೆಚ್ಚಳದ ಪರಿಣಾಮದಿಂದಾಗಿ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.39ರಷ್ಟು ಏರಿಕೆ ಕಂಡಿದೆ.
2015ರ ಮಾರ್ಚ್‌ನಲ್ಲಿ  ಕೈಗಾರಿಕಾ ಪ್ರಗತಿಯು ಶೇ 2.5ರಷ್ಟಿದ್ದಿದ್ದು, 2016ರ ಫೆಬ್ರವರಿಯಲ್ಲಿ ಶೇ 2ರಷ್ಟು ಪ್ರಗತಿ ಕಂಡಿತ್ತು ಎಂದು ಕೇಂದ್ರ ಅಂಕಿ ಅಂಶ ಇಲಾಖೆ ಮಾಹಿತಿ ನೀಡಿದೆ. ನಿರ್ಮಾಣ, ಗಣಿ ಮತ್ತು ಭಾರಿ ಯಂತ್ರೋಪಕರಣ ವಲಯದ ಕಳಪೆ ಸಾಧನೆಯೇ ಕೈಗಾರಿಕಾ ಪ್ರಗತಿ ಇಳಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಮಾರ್ಚ್‌ನಲ್ಲಿ ಶೇ 4.83ರಷ್ಟಿದ್ದ ಹಣದುಬ್ಬರ ಏರಿಕೆಯು, ಏಪ್ರಿಲ್‌ನಲ್ಲಿ ಶೇ 0.56ರಷ್ಟು ಅಲ್ಪ ಏರಿಕೆ ಕಾಣುವ ಮೂಲಕ ಶೇ 5.39ಕ್ಕೆ ತಲುಪಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರ ಏರಿಕೆ ಪ್ರಮಾಣ 2015ರ ಏಪ್ರಿಲ್‌ನಲ್ಲಿ  ಶೇ 4.87ರಷ್ಟಿತ್ತು.
ಇತ್ತ, ಕೈಗಾರಿಕಾ ಪ್ರಗತಿಗೆ ಶೇ 75ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯದ ಪ್ರಗತಿಯು ಶೇ 2.7 ರಿಂದ ಶೇ 1.2ಕ್ಕೆ ಇಳಿಕೆ ಯಾಗಿದೆ. ಪ್ರಸ್ತುತ ವಲಯದಲ್ಲಿ  ಕಳೆದ ವರ್ಷಕ್ಕೆ ಹೋಲಿಸಿದರೆ 2015-16ರಲ್ಲಿ  ಶೇ. 2ರಷ್ಟು ಏರಿಕೆ ಕಂಡು ಬಂದಿದೆ.
ಒಟ್ಟಾರೆ 22 ಕೈಗಾರಿಕೆಗಳಲ್ಲಿ 12 ಕೈಗಾರಿಕೆಗಳು ಉತ್ತಮ ಪ್ರದರ್ಶನ ತೋರಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಇಲ್ಲಿ ಧನಾತ್ಮಕ ಬೆಳವಣಿಗೆ ಕಂಡಿದೆ.
ಇನ್ನುಳಿದಂತೆ ಆಹಾರ ಹಣದುಬ್ಬರ ಶೇ 5.21ರಿಂದ ಶೇ 6.32ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಅಂಕಿ ಅಂಶ ಇಲಾಖೆ ಮಾಹಿತಿ ನೀಡಿದೆ. ಮಾಂಸ ಮತ್ತು ಮೀನಿನ ಬೆಲೆ ಶೇ 8.07ರಷ್ಟು  ಮತ್ತು ಅಡುಗೆ ತೈಲ ಬೆಲೆ ಶೇ 5.04ರಷ್ಟು ಏರಿಕೆಯಾಗಿದ್ದು, ಏಕದಳ ಧಾನ್ಯ ಮತ್ತು  ಉತ್ಪನ್ನಗಳ ಬೆಲೆ ಸ್ಥಿರವಾಗಿದ್ದು ಶೇ 2.43ರಷ್ಟಿದೆ. 
 ಹಿಂದಿನ ವರ್ಷಕ್ಕೆ  ಹೋಲಿಸಿದರೆ ಮೊಟ್ಟೆ, ಇಂಧನ,  ಬೇಳೆಕಾಳು ಮತ್ತು ವಿದ್ಯುತ್‌ ಬೆಲೆ ಏರಿಕೆ ಅಲ್ಪ ಏರಿಕೆಯಾಗಿದ್ದು ಇಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಬಲ್ಲಮೂಲಗಳು ವರದಿ ಮಾಡಿವೆ. 
ಈ ನಡುವೆ ಮಾರ್ಚ್‌ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಕುಸಿತಗೊಂಡಿರುವುದು ಮತ್ತು ಏಪ್ರಿಲ್‌ನಲ್ಲಿ ಹಣದುಬ್ಬರ ಏರಿಕೆಯಾಗಿರುವುದರಿಂದ  ಭಾರತೀಯ ರಿಸರ್ವ್‌ ಬ್ಯಾಂಕ್‌ ಬ್ಯಾಂಕ್‌ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ದೂರವಾಗಿದೆ. ಆದರೆ ಇದು ದೇಶದ  ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com