4ನೇ ತ್ರೈಮಾಸಿಕ ಅವಧಿಯಲ್ಲಿ 5,367 ಕೋಟಿ ರೂಪಾಯಿ ನಷ್ಟ ಕಂಡ ಪಿಎನ್ ಬಿ

ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಹಣಕಾಸು ವರ್ಷದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಹಣಕಾಸು ವರ್ಷದ 4ನೇ ತ್ರೈಮಾಸಿಕ ಅವಧಿಯ ವರದಿಯನ್ನು ಪ್ರಕಟಿಸಿದ್ದು, 5 ಸಾವಿರದ 367.14 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದೆ. ಭಾರತೀಯ ಬ್ಯಾಂಕು ಇತಿಹಾಸದಲ್ಲಿಯೇ ಇದು ಭಾರಿ ಪ್ರಮಾಣದ ತ್ರೈಮಾಸಿಕ ಅವಧಿಯ ನಷ್ಟ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಈ ಮೊದಲಿನ 3ನೇ ತ್ರೈಮಾಸಿಕ ಅವಧಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 306.56 ಕೋಟಿ ರೂಪಾಯಿ ಲಾಭ ತೋರಿಸಿತ್ತು. ಈ ತ್ರೈಮಾಸಿಕಕ್ಕೆ ಒಟ್ಟು ಆದಾಯ ಕಳೆದ ವರ್ಷಕ್ಕಿಂತ ಶೇಕಡಾ 1.33ರಷ್ಟು ಕಡಿಮೆಯಾಗಿದ್ದು 13 ಸಾವಿರದ 455.65 ಕೋಟಿ ರೂಪಾಯಿಯಿಂದ 13 ಸಾವಿರದ 276.19 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

ಬ್ಯಾಂಕಿನ ಅನುತ್ಪಾದಕ ಆಸ್ತಿ ಮೌಲ್ಯ(ಎನ್ ಪಿಎ) ಮೂರು ಪಟ್ಟು ಅಧಿಕವಾಗಿದ್ದು, ಈ ಮೊದಲ ತ್ರೈಮಾಸಿಕ ಅವಧಿಯಲ್ಲಿ 3 ಸಾವಿರದ 834.19 ಕೋಟಿ ರೂಪಾಯಿಗಳಿತ್ತು. ಅದೀಗ 10 ಸಾವಿರದ 485.23 ಕೋಟಿ ರೂಪಾಯಿಗಳಷ್ಟಾಗಿದೆ. ಮಾರ್ಚ್ ಕೊನೆಯ ವೇಳೆಗೆ ಅನುತ್ಪಾದಕ ಆಸ್ತಿ ಮೌಲ್ಯ ಶೇಕಡಾ 12.90ರಷ್ಟು ಹೆಚ್ಚಾಗಿದೆ. ಅದು ಕಳೆದ ವರ್ಷ ಶೇಕಡಾ 6.55ರಷ್ಟಿತ್ತು.

ಬ್ಯಾಂಕಿನ ಒಟ್ಟು ಆದಾಯ ಕಳೆದ ಹಣಕಾಸು ವರ್ಷದ ತ್ರೈಮಾಸಿಕ ಅವಧಿಯಲ್ಲಿದ್ದ 52 ಸಾವಿರದ 206.09 ಕೋಟಿ ರೂಪಾಯಿಗಳಿಂದ 54 ಸಾವಿರದ 301.37 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕ್ ವ್ಯವಹಾರದಲ್ಲಿ ಪಾರದರ್ಶಕತೆಗೆ ಆದೇಶ ನೀಡಿದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಮರುಪಾವತಿಯಾಗದ ಸಾಲಗಳ ಪ್ರಮಾಣ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com