ಮುಂಬೈ: ಟಾಟಾ-ಮಿಸ್ಟ್ರಿ ಮಂಡಳಿ ಪುರಾಣ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪರಸ್ಪರ ಕೆಸರೆರಚಾಟದಲ್ಲಿ ಇಬ್ಬರೂ ತೊಡಗಿದ್ದಾರೆ. ಸೈರಸ್ ಮಿಸ್ಟ್ರಿಯವರು ಕಂಪೆನಿಗೆ ಸಾಕಷ್ಟು ಕೆಟ್ಟ ಹೆಸರು ತಂದಿದ್ದಾರೆ, ಅವರನ್ನು ಟಾಟಾ ಸನ್ಸ್ ನಿರ್ದೇಶಕರ ಮಂಡಳಿ ಸ್ಥಾನದಿಂದಲೂ ತೆಗೆದುಹಾಕಬೇಕೆಂದು ಕಂಪೆನಿ ಮೊನ್ನೆ ಹೇಳಿಕೆ ಬಿಡುಗಡೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ನಿನ್ನೆ ಸೈರಸ್ ಮಿಸ್ಟ್ರಿ ಟಾಟಾ ಸನ್ಸ್ ಮತ್ತು ಕಂಪೆನಿಯ ಮುಖ್ಯಸ್ಛ ರತನ್ ಟಾಟಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಐದು ಪುಟಗಳ ಕಾಗದದಲ್ಲಿ ತಮ್ಮ ವಿರುದ್ಧ ಕಂಪೆನಿ ಮಾಡಿರುವ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ. ಅಲ್ಲದೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಮತ್ತು ಜಾಗ್ವಾರ್ ಲ್ಯಾಂಡ್ ರೊವರ್ ಕಂಪೆನಿಗಳನ್ನು ರತನ್ ಟಾಟಾ ಅವರು ಐಟಿ ಸಂಸ್ಥೆ ಐಬಿಎಂಗೆ ಮಾರಾಟ ಮಾಡಲು ನೋಡಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.