ಬ್ಯಾಂಕ್ ಖಾತೆಗೆ ಜಮಾ ಮಾಡಿದ ಕಪ್ಪುಹಣಕ್ಕೆ ಶೇ.50ರಷ್ಟು ತೆರಿಗೆ, 4 ವರ್ಷ ಬಳಕೆ ಇಲ್ಲ!

ಕಪ್ಪು ಕುಳಗಳಿಗೊಂದು ಸಿಹಿ ಸುದ್ದಿ. ಹೌದು, ಕೇಂದ್ರ ಸರ್ಕಾರ ನೋಟು ನಿಷೇಧ ಕ್ರಮದಡಿ ಬ್ಯಾಂಕ್‌ ಖಾತೆಗೆ ಕಪ್ಪು ಹಣವನ್ನು ಜಮೆ ಮಾಡುವವರಿಗಾಗಿ ಹೊಸ ಘೋಷಣಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಪ್ಪು ಕುಳಗಳಿಗೊಂದು ಸಿಹಿ ಸುದ್ದಿ. ಹೌದು. ಕೇಂದ್ರ ಸರ್ಕಾರ ನೋಟು ನಿಷೇಧ ಕ್ರಮದಡಿ ಬ್ಯಾಂಕ್‌ ಖಾತೆಗೆ ಕಪ್ಪು ಹಣವನ್ನು ಜಮೆ ಮಾಡುವವರಿಗಾಗಿ ಹೊಸ ಘೋಷಣಾ ಯೋಜನೆಯೊಂದನ್ನು ಜಾರಿಗೆ ತರುತ್ತಿದ್ದು, ಈ ಯೋಜನೆಯಡಿ ನಿಷೇಧಿತ 500 ಹಾಗೂ 1000 ರುಪಾಯಿ ಮೌಲ್ಯದ ಕಪ್ಪು ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವವರಿಗೆ ಶೇ.50 ತೆರಿಗೆ ವಿಧಿಸಲಾಗುವುದು ಮತ್ತು ಅವರು ಜಮೆ ಮಾಡಿರುವ ಕಪ್ಪು ಹಣವನ್ನು ನಾಲ್ಕು ವರ್ಷಗಳ ಮಟ್ಟಿಗೆ ಉಪಯೋಗಿಸುವಂತಿಲ್ಲ!
ಒಂದು ವೇಳೆ ಈ ಯೋಜನೆಯನ್ನು ಬಳಸಿಕೊಳ್ಳದವರು ಅನಂತರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕರೆ ಶೇ.60ಕ್ಕೂ ಹೆಚ್ಚು ದಂಡ ಹಾಗೂ ಸುದೀರ್ಘಾವಧಿಯವರೆಗೆ ಆ ಹಣವನ್ನು ಉಪಯೋಗಿಸಲು ಅವಕಾಶ ನೀಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಮುಂದಿನ ವಾರ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿಯನ್ನು ತರಲಿದೆ ಎನ್ನಲಾಗಿದೆ.
ನವೆಂಬರ್‌ 8ರಂದು 500 ಹಾಗೂ 1000 ರುಪಾಯಿ ನಿಷೇಧಿಸಿದ ನಂತರ ನವೆಂಬರ್ 10ರಿಂದ ಡಿಸೆಂಬರ್ 30ರವರೆಗೆ ಬ್ಯಾಂಕ್ ಖಾತೆಗಳಿಗೆ ಜಮೆಯಾದ ಕಪ್ಪು ಹಣದ ಮೇಲೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಈಗಾಗಲೇ ರದ್ದಾಗಿರುವ 500 ರು ಮತ್ತು 1,000 ರು. ನೋಟುಗಳ ವಿನಿಮಯವನ್ನು ನಿಲ್ಲಿಸುವಂತೆ ಬ್ಯಾಂಕುಗಳಿಗೆ ಆದೇಶಿಸಿದ್ದು, ಅಲ್ಲದೆ ಡಿ.15ರ ತನಕ ಸರ್ಕಾರ ಗುರುತಿಸಿರುವ 21 ವಿಷಯಗಳಿಗೆ ಸಂಬಂಧಿಸಿದಂತೆ ಹಳೆ 500 ರು. ನೋಟುಗಳನ್ನು ಬಳಸುವುದಕ್ಕೆ ಅವಕಾಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com