ಸಿರಿವಂತರ ಗಳಿಕೆ ಎಲ್ಲಿಯಾಗುತ್ತಿದೆ ಹೂಡಿಕೆ ?

'ಕೈ ಕೆಸರಾದರೆ ಬಾಯಿ ಮೊಸರು' ಎನ್ನುವ ಜಗತ್ತಿನ ಜನರ ನಂಬಿಕೆಗೆ ಇವರು ವಿರುದ್ಧ. ' ಕೈ ಕೆಸರಾದರೆ ಮೈಯೆಲ್ಲಾ ಕೆಸರು' ಎನ್ನುವುದು ಇವರ ವಾದ.
ಸಿರಿವಂತರ ಗಳಿಕೆ ಎಲ್ಲಿಯಾಗುತ್ತಿದೆ ಹೂಡಿಕೆ ?
ಸಿರಿವಂತರ ಗಳಿಕೆ ಎಲ್ಲಿಯಾಗುತ್ತಿದೆ ಹೂಡಿಕೆ ?
ಶ್ರೀಮಂತರು ನಮ್ಮಂತೆ ನೆಡೆದಾಡುವ ಮನುಷ್ಯರೇ ಅವರೇನು ಅನ್ಯ ಗ್ರಹದಿಂದ ಬಂದವರಲ್ಲ. ಆದರೆ ನಮಗಿಂತ ಬಿನ್ನವಾದ ಆಲೋಚನೆ, ನೆಡವಳಿಕೆ ಅವರನ್ನ ನಮಗಿಂತ ಹೆಚ್ಚು ಪ್ರಸಿದ್ದರೂ ಯಶಸ್ವಿಯೂ ಆಗುವ  ಹಾಗೆ ಮಾಡುತ್ತೆ. ಇವರ ಹೂಡಿಕೆ ಇವರನ್ನ ಮತ್ತಷ್ಟು ಶ್ರೀಮಂತರನ್ನಾಗಿಸುತ್ತೆ. ಶ್ರೀಮಂತರಿಗೆ ಎಲ್ಲಿ ಹೂಡಿಕೆ ಮಾಡಬೇಕೆನ್ನುವ ಅಷ್ಟು ಜ್ಞಾನವಿರುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರ ಜ್ಞಾನ ಇರಲೇಬೇಕೆಂದು ಇಲ್ಲ. ವಿಷಯ ತಜ್ಞರ ಸಹಾಯ ಪಡೆಯಬೇಕೆಂಬ ತಿಳುವಳಿಕೆ ಇದ್ದರೆ ಸಾಕು. 

ಶ್ರೀಮಂತರು ಮಧ್ಯಮವರ್ಗದಂತೆ ಎಲ್ಲಾ ನನಗೆ ಗೊತ್ತು, ನಾನೇ ಮಾಡುತ್ತೇನೆ ಎನ್ನುವ ಮನಸ್ಥಿತಿಯಿಂದ ಬಹು ದೂರ.  ಹಣದಿಂದ ಹಣ ದುಡಿಯಬೇಕು ಎನ್ನುವ ಸಿದ್ದಾಂತ ಇವರದು. 'ಕೈ ಕೆಸರಾದರೆ ಬಾಯಿ ಮೊಸರು' ಎನ್ನುವ ಜಗತ್ತಿನ ಜನರ ನಂಬಿಕೆಗೆ ಇವರು ವಿರುದ್ಧ. ' ಕೈ ಕೆಸರಾದರೆ ಮೈಯೆಲ್ಲಾ ಕೆಸರು' ಎನ್ನುವುದು ಇವರ ವಾದ.   

ಇರಲಿ. ಇವರನ್ನ ಶ್ರೀಮಂತ ಅಂತ ಕರೆಯಲು  ಯಾವುದೇ ಯೂನಿವರ್ಸಿಟಿ ಅಥವಾ ಹಣಕಾಸು ಸಂಸ್ಥೆ ಯಾವುದೇ ವ್ಯಾಖ್ಯಾನ ನೀಡಿಲ್ಲ. ಹಾಗಾದರೆ ಶ್ರೀಮಂತ ಅಂತ ನಾವು ಯಾರನ್ನ ಕರೆಯಬಹದು ? ನಮ್ಮೋರ ಸಾಹುಕಾರ ಸಿದ್ದಪ್ಪನನ್ನ ಈ ಲಿಸ್ಟ್ನಲ್ಲಿ ಹಾಕಬಹುದೇ?

ಇವರು ಸಾಹುಕಾರರು ಎಂದು ಗುರುತಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಮಾನದಂಡಗಳಿವೆ. ಇವರನ್ನ ಇಲ್ಲಿ ಹೈ ನೆಟ್ ವರ್ತ್ ಇಂಡಿವಿಜುಯಲ್ (HNWI ) ಎನ್ನುತ್ತಾರೆ. ಇವರಲ್ಲೂ ಸಬ್, ಅಲ್ಟ್ರಾ ಗಳಿದ್ದಾರೆ. ಏನಿದು ಮಾನದಂಡ ಎನ್ನುವುದು ತಿಳಿದರೆ , ಶ್ರೀಮಂತರು ಎಂದು ಯಾರನ್ನ ಕರೆಯಬಹದು ಎನ್ನುವ ಒಂದು ತಿಳುವಳಿಕೆ ನಮ್ಮದಾಗುತ್ತೆ . ನಂತರ ಅವರೆಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎನ್ನುವುದ ನೋಡೋಣ . 

ನೆಟ್ ವರ್ತ್ ಎಂದರೇನು ?
 ತಮ್ಮ ಒಟ್ಟು ಆಸ್ತಿ ತಮ್ಮ ಒಟ್ಟು ಲಿಯಬಿಲಿಟಿ ಗಿಂತ ಹೆಚ್ಚಿದ್ದರೆ ಅದನ್ನ ನೆಟ್ ವರ್ತ್ ಎನ್ನುತ್ತೇವೆ . ಉದಾಹರಣೆ ನೋಡೋಣ . ರಾಮನ ಬಳಿ ಒಂದು ಮನೆಯಿದೆ ಇಂದಿನ ಅದರ ಮಾರುಕಟ್ಟೆ ಬೆಲೆ ಒಂದು ಕೋಟಿ , ಮತ್ತು ಆತನ ಕಾರು  ಹತ್ತು ಲಕ್ಷ ಎಂದುಕೊಳ್ಳಿ . ಮನೆಯ ಮೇಲಿನ ಸಾಲ ಐವತ್ತು ಲಕ್ಷ ಮತ್ತು ಕಾರಿನ ಮೇಲಿನ ಸಾಲ ಐದು ಲಕ್ಷ ಎಂದುಕೊಳ್ಳಿ . ರಾಮನ ನೆಟ್ ವರ್ತ್ ಎಷ್ಟು ? ಉತ್ತರ ಸುಲಭ ಒಟ್ಟು ಆಸ್ತಿ ಮೊತ್ತ ಒಂದು ಕೋಟಿ ಹತ್ತು ಲಕ್ಷ . ಲಿಯಬಲಿಟಿ ಐವತ್ತೈದು ಲಕ್ಷ . ಅಸೆಟ್ ಮೌಲ್ಯದಿಂದ ಲಿಯಬಿಲಿಟಿ ಮೌಲ್ಯ ಕಳೆಯಿರಿ ಉಳಿದದ್ದು ನೆಟ್ ವರ್ತ್. ರಾಮನ ನೆಟ್ ವರ್ತ್ ಐವತ್ತೈದು ಲಕ್ಷ . 

ಹೈ ನೆಟ್ ವರ್ತ್ ಇಂಡಿವಿಜುಯಲ್ ಎಂದರೇನು ? 

ಒಂದು ಮಿಲಿಯನ್ ಅಮೇರಿಕನ್ ಡಾಲರ್ ಹಣವನ್ನ ಲಿಕ್ವಿಡ್ ಫೈನಾನ್ಸಿಯಲ್ ಆಸೆಟ್ಸ್ ನಲ್ಲಿ ಹೊಂದಿರುವವನ್ನ ಹೈ ನೆಟ್ ವರ್ತ್ ಇಂಡಿವಿಜುಯಲ್ ಎನ್ನುತ್ತಾರೆ . ಲಿಕ್ವಿಡ್ ಫೈನಾಸಿಯಲ್ ಅಸೆಟ್ ಅಂದರೆ ಹಣ , ಬಂಗಾರ ಅಥವಾ ಯಾವುದೇ ಶೀಘ್ರವಾಗಿ ಮಾರಾಟ ಮಾಡಿ ಹಣದ ರೂಪಕ್ಕೆ ಪರಿವರ್ತಿಸಲು ಸಾಧ್ಯವಾಗುವ ಆಸ್ತಿ ಎಂದರ್ಥ . 

ಒಂದು ಲಕ್ಷದಿಂದ ಒಂದು ಮಿಲಿಯನ್ ಅಮೇರಿಕನ್ ಡಾಲರ್ ವರೆಗಿನ ಲಿಕ್ವಿಡ್ ಫೈನಾನ್ಸಿಯಲ್ ಆಸೆಟ್ ಹೊಂದಿರುವವನ್ನ ಸಬ್ ಹೈ ನೆಟ್ ವರ್ತ್ ಎಂದೂ , ಐದು ಮಿಲಿಯನ್ ಮೀರಿದ ಈ ರೀತಿಯ ಹಣವಂತನನ್ನ ವೆರಿ ಹೈ ನೆಟ್ ವರ್ತ್ ಇಂಡಿವಿಜುಯಲ್ ಎನ್ನುತ್ತೇವೆ . ಮೂವತ್ತು ಮಿಲಿಯನ್ ಗೂ ಮೀರಿದ ಲಿಕ್ವಿಡ್ ಫೈನಾನ್ಸಿಯಲ್ ಅಸೆಟ್ ಹೊಂದಿರುವವನ್ನ ಅಲ್ಟ್ರಾ ಹೈ ನೆಟ್ ವರ್ತ್ ಎನ್ನುವ ಪಟ್ಟಿಗೆ ಸೇರಿಸಲಾಗುತ್ತದೆ . 
ನಿಮ್ಮೊರ ಸಾಹುಕಾರ ಸಿದ್ದಪ್ಪನ ಈ ಪಟ್ಟಿಗೆ ಸೇರಿಸಬಹುದೇ ? ಆತನನ್ನೇ ಕೇಳಿ ನೋಡಿ . 

ಮೊದಲೇ ಹೇಳಿದಂತೆ ಹೈ ನೆಟ್ ವರ್ತ್ ಇಂಡಿವಿಜುಯಲ್ ಗಳು ತಮ್ಮ ಹಣಕಾಸು ಸಂಬಂಧಪಟ್ಟ ವಿಷಯಗಳನ್ನ ತಾವೇ ನೋಡಿಕೊಳ್ಳುವುದಿಲ್ಲ . ಹೂಡಿಕೆ ಸಲಹಾಗಾರು , ತೆರಿಗೆ ಸಲಹೆಗಾರರು , ಹೀಗೆ ಹಣಕಾಸಿನಲ್ಲೂ ವಿವಿಧ ಕ್ಷೇತ್ರಗಲ್ಲಿ ನೈಪುಣ್ಯತೆ ಹೊಂದಿದವರನ್ನ ಇದಕ್ಕಾಗಿ ನೇಮಿಸಿಕೊಂಡಿರುತ್ತಾರೆ .  ಮುಖ್ಯವಾಗಿ ಇವರ ಹೂಡಿಕೆ ಕ್ಷೇತ್ರಗಳಾವುವು ನೋಡೋಣ ಬನ್ನಿ. 
  • ಸ್ಥಿರಾಸ್ತಿ ಗಳಾದ ಮನೆ , ಜಮೀನು , ಚಿನ್ನ ದ ಜೊತೆಗೆ ದ್ವೀಪ(ಐಲ್ಯಾಂಡ್ ) ಕೊಳ್ಳುವುದು ಹೈ  ನೆಟ್ ವರ್ತ್ ವ್ಯಕ್ತಿಗಳ ಪುರಾತನ ಮತ್ತು ಅತ್ಯಂತ ಸುರಕ್ಷಿತ ಹೂಡಿಕೆ ಕ್ಷೇತ್ರ . ಉತ್ತಮ ಕಂಪೆನಿಗಳಲ್ಲಿ ಪಾಲುದಾರಿಕೆ , ಷೇರು ಕೊಳ್ಳುವುದು ಬಹಳ ಹಳೆಯ ಹೂಡಿಕೆ ದಾರಿಗಳು . 
  • ಕಲೆಯಲ್ಲಿ ಹೂಡಿಕೆ ಇವರ ಇನ್ನೊಂದು ಅತ್ಯಂತ ಮುಖ್ಯ ಹೂಡಿಕೆ ಕ್ಷೇತ್ರ . ಹೌದು ಕಲೆಗಾರನಿಗೆ ಸಿಗದ ಬೆಲೆ ಆತನಿಂದ ಸೃಷ್ಟಿಸಿದ ಕಲೆಗೆ ಇಂದು ಮಾರುಕಟ್ಟೆಯಲ್ಲಿ ಬೆಲೆಯಿದೆ . ಜಗತ್ತಿನ ಅತಿ ಶ್ರೀಮಂತರು ೧೨೦ ಮಿಲಿಯನ್ ಅಮೆರಿಕನ್ ಡಾಲರ್ ಕೊಟ್ಟು ಒಂದು ಪೇಂಟಿಂಗ್ ಖರೀದಿಸಿದ ಉದಾಹರಣೆ ನಮ್ಮ ಮುಂದಿದೆ . ಹುಬ್ಬೇರಿಸಬೇಡಿ  ಇದು ನಿಜ ೧೨ ಕೋಟಿ ರೂಪಾಯಿ ಕೇವಲ ಒಂದು ಚಿತ್ರ ಪಟಕ್ಕೆ ಕೊಡುವ ಜನ ಇಲ್ಲಿದ್ದಾರೆ . ಈಗ ನೀವು ಇದೆಂತ ಹೂಡಿಕೆ ನಾಳೆ ಅದನ್ನ ಮಾರಬೇಕೆಂದರೆ ಅದನ್ನ ಮತ್ತೆ ೧೨೦ ಮಿಲಿಯನ್ ಡಾಲರ್ ಗೆ ಕೊಳ್ಳುವರಾರು ? ಎನ್ನುವ ಪ್ರಶ್ನೆ ಎತ್ತಬಹದು . ಕೊಂಡ ತಿಂಗಳಿಗೆ ಅದು ೧೩೦ ಮಿಲಿಯನ್ ಡಾಲರ್ ಗೆ ಮಾರಾಟವಾದಾರೆ ಅದರಲ್ಲಿ ಆಶ್ಚರ್ಯವಿಲ್ಲ . ಇಂತಹ ಪೇಂಟಿಂಗ್ ಇಷ್ಟು ಬೆಲೆ ಬಾಳುತ್ತೆ ಎಂದು ಬೆಲೆ ಕಟ್ಟಲು ಒಂದು ಪರಿಣಿತರ ಗುಂಪೇ ಇದೆ . ಇಲ್ಲಿ ಮಾರುಕಟ್ಟೆ ಮೌಲ್ಯ ನಿರ್ಧಾರವಾಗುವುದು ಇಂತವರಿಂದಲ್ಲ ಅದು ನಿರ್ಧಾರವಾಗುವುದು ಕೊಳ್ಳುವನ ಅಹಮಿಕೆಯಿಂದ , ಹೀಗಾಗಿ ಇದರ ಮಾರುಕಟ್ಟೆ ಬೆಲೆ ಎಂದೂ ಕುಸಿಯುವುದಿಲ್ಲ . 
  • ಜೂಜು , ಅಮ್ಯೂಸ್ಮೆಂಟ್ ಪಾರ್ಕ್ , ರಿಟೇಲ್ ಚೈನ್ ಸ್ಟೋರ್ಸ್ ,ಆಸ್ಪತ್ರೆ , ಸಿನಿಮಾ ತಯಾರಿಕೆ ನಂತರದ ಸ್ಥಾನ ಪಡೆಯುತ್ತವೆ . 
  • ಇತ್ತೀಚಿಗೆ ಎಲ್ಲರೂ ಹೂಡಿಕೆಗೆ ತಾ ಮುಂದು ನಾ ಮುಂದು ಎಂದು ಬರುತ್ತಿರುವ ಕ್ಷೇತ್ರವೇ ಟೆಕ್ನಾಲಜಿ .  ತಂತ್ರಜ್ಞಾನದ ಮುಂದುವರಿಕೆಯ ಫಲವಾಗಿ ಹೊರ ಹೊಮ್ಮಿದ ಬಿಟ್ ಕಾಯಿನ್ ಇವರ ಕೈಯಲ್ಲಿ ಇರುವ ಹೊಸ ಆಟಿಕೆ . ಹೊಸ ಹೊಸ ಆಪ್ ಗಳ ತಯಾರಿಕೆಯಲ್ಲಿ , ನವೋದ್ಧಿಮೆ ( ಸ್ಟಾರ್ಟ್ ಅಪ್ ) ಯಲ್ಲಿ ಹೆಚ್ಚು ಹೆಚ್ಚಾಗಿ ಹಣವನ್ನ ಹೂಡುತ್ತಿದ್ದಾರೆ . 
  • ಅಸೆಂಚೂರ್ ಕನ್ಸಲ್ಟಿಂಗ್ ಯೂರೋಪಿನಲ್ಲಿ ೧೨೦೦ ಕ್ಕೂ ಹೆಚ್ಚು ಹೂಡಿಕೆದಾರರನ್ನ ಸಮೀಕ್ಷೆಗೆ ಒಳಪಡಿಸಿತ್ತು . ಇದರಲ್ಲಿ ಅತಿ ಶ್ರೀಮಂತರು ಇದ್ದರು ಎಂದು ಬೇರೆ ಹೇಳಬೇಕಿಲ್ಲ ಅಲ್ಲವೇ . ? ಸಾಮಾನ್ಯ ಹೂಡಿಕೆದಾರರಿಗಿಂತ ಅತಿ ಶ್ರೀಮಂತ ಹೂಡಿಕೆದಾರರಲ್ಲಿ ವಿಷಯದ ಗ್ರಹಿಕೆ ಹೆಚ್ಚಾಗಿತ್ತು . ಕಲಿಯಬೇಕು ಅದೇನು ಎಂದು ತಿಳಿಯಬೇಕು ಎನ್ನುವ ಹಂಬಲ ಹೆಚ್ಚಾಗಿತ್ತು  ಎನ್ನುತ್ತೆ ಆ ಸಮೀಕ್ಷೆಯ ಉತ್ತರ . ಅತಿ ಶ್ರೀಮಂತರು , ಶ್ರೀಮಂತರು ಏಕೆ ಮತ್ತೆ ಶ್ರೀಮಂತರಾಗುತ್ತಾರೆ ? ಎನ್ನುವುದಕ್ಕೆ ಉತ್ತರ ಸಿಕ್ಕಿತು ಅಲ್ಲವೇ . ? 
ಪರಿಸ್ಥಿತಿಯ ನಿಖರ ಗ್ರಹಿಕೆ , ಶೀಘ್ರ ಬದಲಾವಣೆ , ಹೊಂದಾವಣಿಕೆ , ಸೋಲು ಗೆಲುವನ್ನ ಅಳೆದು ತೂಗಿ ಮಾಡುವ ಹೂಡಿಕೆ ಅವರನ್ನ ಜನ ಸಾಮಾನ್ಯರಿಂದ ಬೇರ್ಪಡಿಸುತ್ತೆ . ಶ್ರೀಮಂತರಾಗಲು ಹೆಣಗಬೇಕಾಗಿಲ್ಲ ತಿಣುಕಬೇಕಾಗಿಲ್ಲ ಸೋಲೊಪ್ಪದ ಮನಸ್ಥಿತಿ , ಬಿಡದ ಕಲಿಕೆ -ಹೂಡಿಕೆ ಸಾಕು. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com