ಆಧಾರ್ ಇಲ್ಲವೆಂದು ಸೌಲಭ್ಯ ನಿರಾಕರಣೆ ನಿಯಮ ಉಲ್ಲಂಘನೆಯಾಗುತ್ತದೆ: ಅಜಯ್ ಭೂಷಣ್ ಪಾಂಡೆ

ಆಧಾರ್ ಸಂಖ್ಯೆ ಇಲ್ಲದಿರುವವರಿಗೆ ಅಥವಾ ಅದರ ನಿಖರತೆಯಲ್ಲಿ ಏನಾದರೂ ಸಮಸ್ಯೆಯಿದ್ದರೆ ಅಂಥವರಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಧಾರ್ ಸಂಖ್ಯೆ ಇಲ್ಲದಿರುವವರಿಗೆ ಅಥವಾ ಅದರ ನಿಖರತೆಯಲ್ಲಿ ಏನಾದರೂ ಸಮಸ್ಯೆಯಿದ್ದರೆ ಅಂಥವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ನಿರಾಕರಿಸಿದರೆ ಅದು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಶಿಕ್ಷೆ ನೀಡಬಹುದು ಎಂದು ಭಾರತೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ದೇಶದ ಜನತೆಗೆ 12 ಅಂಕೆಗಳ ಗುರುತು ಚೀಟಿ ನೀಡುವ ಸಂಸ್ಥೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ,ಆಧಾರ್ ಸಂಖ್ಯೆ ಇಲ್ಲದವರು ನಕಲಿ ಫಲಾನುಭವಿಗಳೆಂದು ಕೆಲವು ಕಾರ್ಯಕರ್ತರು ಸಂಶಯ ವ್ಯಕ್ತಪಡಿಸುವುದು ತಪ್ಪು ಎಂದು ಹೇಳಿದರು.
ದುರುದ್ದೇಶಪೂರಕವಾಗಿ ಆಧಾರ್ ಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ತಪ್ಪು ಮಾಹಿತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ತಪ್ಪು ಮಾಹಿತಿ ನೀಡುವುದು ದುರುದ್ದೇಶದಿಂದ. ಇದರಿಂದ ಆಧಾರ್ ಬಗ್ಗೆ ಜನತೆಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ಪಾಂಡೆ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಧಾರ್ ಸಂಖ್ಯೆ ಜನರ ಸಬಲೀಕರಣಕ್ಕಾಗಿ ಇರುವುದೇ ಹೊರತು ಸರ್ಕಾರಿ ಸೌಲಭ್ಯಗಳಿಂದ ಜನರನ್ನು ಹೊರಗಿಡಲು ಅಥವಾ ನಿರಾಕರಿಸಲು ಅಲ್ಲ ಎಂದು ಅವರು ಆಧಾರ್ ನ್ನು ವ್ಯಾಖ್ಯಾನಿಸಿದ್ದಾರೆ.
ಇದುವರೆಗೆ ದೇಶದಲ್ಲಿ 116 ಕೋಟಿ ಜನರು 12 ಅಂಕೆಗಳ ಆಧಾರ್ ಸಂಖ್ಯೆಯನ್ನು ಹೊಂದಿದ್ದು ಶೇಕಡಾ 99ರಷ್ಟು ವಯಸ್ಕರು ಪಡೆದುಕೊಂಡಿದ್ದಾರೆ. ಆಧಾರ್ ಇಲ್ಲವೆಂದು ಒಬ್ಬನೇ ಒಬ್ಬ ವ್ಯಕ್ತಿಗೆ ಕೂಡ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಆಧಾರ್ ಕಾಯ್ದೆಯೇ ಹೇಳುತ್ತದೆ ಎಂದು ಅವರು ಉಲ್ಲೇಖಿಸಿದರು.
ಒಬ್ಬ ವ್ಯಕ್ತಿ ಆಧಾರ್ ಸಂಖ್ಯೆಗೆ ಅರ್ಜಿ ಹಾಕಿದ ನಂತರ ಆತನಿಗೆ ಸಿಗುವವರೆಗೂ ಸೌಲಭ್ಯಗಳನ್ನು ನೀಡದೆ ಇರಲಾಗುವುದಿಲ್ಲ. ತಾಂತ್ರಿಕ ಕಾರಣ ಹಾಗೂ ಇತರ ಸಮಸ್ಯೆಗಳಿಂದ ತಮ್ಮ ನಿಖರತೆಯನ್ನು ತೋರಿಸಿಕೊಳ್ಳಲಾಗದಿದ್ದ ವ್ಯಕ್ತಿಗಳಿಗೆ ಆಧಾರ್ ಕಾಯ್ದೆ ಶಾಸನಬದ್ಧ ರಕ್ಷಣೆ ನೀಡುತ್ತದೆ. 
ವ್ಯಕ್ತಿಯ ಬೆರಳಿನ ಗುರುತಿನ ನಿಖರತೆಯನ್ನು ತಾಂತ್ರಿಕ ಸಮಸ್ಯೆ ಕಾರಣದಿಂದ ನೀಡಲು ಸಾಧ್ಯವಾಗದಿದ್ದರೆ ಆ ವ್ಯವಸ್ಥೆ ಸರಿಯಾಗುವವರೆಗೆ ಆಧಾರ್ ಕಾರ್ಡಿನ ಪ್ರತಿಯೊಂದನ್ನು ಸಲ್ಲಿಸಿ ಸರ್ಕಾರಿ ಸೌಲಭ್ಯವನ್ನು ಪಡೆಯುವ ಆಯ್ಕೆ ವ್ಯಕ್ತಿಗಿದೆ ಎಂದು ಪಾಂಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com