ಹೊಸ ವಿಶ್ವ ವ್ಯವಸ್ಥೆ ಬೇಕಿತ್ತೆ ?

ಜಗತ್ತನ್ನ ತಮ್ಮಿಚ್ಚೆಗೆ ಕುಣಿಸುವ ಬೆರಳೆಣಿಕೆ ಮನೆತನಗಳಲ್ಲಿ ರೋತ್ಸ್ ಚೈಲ್ಡ್. ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ ಪ್ರಮುಖವಾದವು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ತಲೆಯಲ್ಲಿ ಒಂದಲ್ಲ ಒಂದು ವಿಷಯದ ಬಗ್ಗೆ ಯೋಚನೆ ಇದ್ದೆ ಇರುತ್ತೆ. ಅಂತಹ ಹಲವು ಯೋಚನೆಗಳಲ್ಲಿ ಕೆಲವು ವೈಯಕ್ತಿಕ ಇನ್ನು ಕೆಲವು ಸಾಮಾಜಿಕ. ನಾವು ಸಾಮಾಜಿಕ ಸಮಸ್ಯೆಗಳನ್ನ ಎಂದೂ ವೈಯಕ್ತಿಕ ಎಂದು ಪರಿಗಣಿಸಿದವರಲ್ಲ. ಹೀಗೆ 'ನನ್ನದಲ್ಲ' ಎನ್ನುವ ಭಾವನೆಯಿಂದ ಯಾರಿಗೂ ಬೇಡದ ಸಾಮಾಜಿಕ ಸಮಸ್ಯೆ ನಾಳೆ ವೈಯಕ್ತಿಕ ಸಮಸ್ಯೆಯಾಗಿ ಬದಲಾಗುತ್ತದೆ. ಆದರೆ ಇಷ್ಟೆಲ್ಲಾ ಯೋಚಿಸಲು ನಮಗೆ ಸಮಯವೆಲ್ಲಿದೆ? ಬೆಳಿಗ್ಗೆ ಏಳು ನಿತ್ಯ ಕರ್ಮಗಳ ಮುಗಿಸಿ ಒಂದಷ್ಟು ತಿಂದು ಅದನ್ನೇ ಡಬ್ಬಿಗೆ ತುಂಬಿಕೊಂಡು ಓಡುವುದು, ಇಷ್ಟವಿರಲಿ ಬಿಡಲಿ ತಿಂಗಳ ಕೊನೆಗೆ ಬರುವ ಸಂಬಳ ಎನ್ನುವ ಒಂದಷ್ಟು ಹಣಕ್ಕಾಗಿ ದುಡಿಯುವುದು, ಸಾಯಂಕಾಲ ಮನೆಗೆ ವಾಪಸ್ಸು ಬಂದು ಒಂದಷ್ಟು ಟಿವಿ ವೀಕ್ಷಣೆ, ಟೀವಿಯಲ್ಲೂ ಬರುವುದು ಅವರು ಏನು ತೋರಿಸಬೇಕು ಅಂದುಕೊಡಿರುತ್ತಾರೆ ಅದು ಬರುತ್ತದೆ. ಅದು ನಿಜವಾಗಿರಬೇಕಿಲ್ಲ. ಮತ್ತೆ ನಿದ್ದೆ ಮತ್ತೆ ಮರುದಿನ ಬೆಳಿಗ್ಗೆ ಮೇಲೆ ಹೇಳಿದ ವಿಷಯಗಳ ಪುನರಾವರ್ತನೆ. ಜಗತ್ತಿನ ಮುಕ್ಕಾಲು ಪಾಲು ಜನರ ಜೀವನದಲ್ಲಿ ಇನ್ನೇನು ಬದಲಾವಣೆ ಇದ್ದೀತು? ನಿಮ್ಮನ್ನ ಈ ರೀತಿಯ ಒಂದು ವರ್ತುಲದಲ್ಲಿ ನಿಮಗೆ ಅರಿವಿಲ್ಲದೆ ದೂಡಿದವರು ಯಾರು? ನೀವು ದುಡಿಯುತ್ತಿರಬೇಕು 'ಅವರು' ಮಾಡಿದ ರೀತಿ ರಿವಾಜು ಕಾನೂನು ಪಾಲಿಸಬೇಕು. ಹೇಳಿದ ತೆರಿಗೆ ಕಟ್ಟಬೇಕು, ವರ್ಷ ವರ್ಷ ಹೆಚ್ಚು ಪದಾರ್ಥಗಳ ಬೆಲೆ ಅದಕ್ಕೆ ತಕ್ಕಂತೆ ಹೆಚ್ಚದ ನಿಮ್ಮ ಸಂಬಳ, ಜೀವನದ ಬಂಡಿ ಹೇಗೂ ಸಾಗಿಸಿದರೆ ಸಾಕು ಎಂದು ನಿಮ್ಮ ವಿವಶವನ್ನಾಗಿಸಿದವರು 'ಅವರು'. ನಿಮ್ಮ ಬಗ್ಗೆ ನೀವು ಯೋಚಿಸಲು ಸಮಯ ನೀಡದ ಒಂದು ವ್ಯವಸ್ಥೆ ಸೃಷ್ಟಿಸಿ 'ಹಣ' ಎನ್ನುವ ಮರೀಚಿಕೆ ಹಿಂದೆ ಸದಾ ಓಡುವಂತೆ ಮಾಡಿರುವ 'ಅವರು 'ಯಾರು? ಅವರೇಕೆ ಹಾಗೆ? ನಾವೇಕೆ ಹೀಗೆ? ಒಂದಷ್ಟು ವಿಶ್ಲೇಷಣೆ ಮಾಡೋಣ.
'ಅವರು' ಎಂದರೆ ಇಂದಿನ ನಮ್ಮ ಜಗತ್ತನ್ನ ಆಳುತ್ತಿರುವ ಅತ್ಯಂತ ಪ್ರಭಾವಿ ಮನೆತನ ಅಥವಾ ವ್ಯಕ್ತಿಗಳು. ಮೇಲ್ನೋಟಕ್ಕೆ ಅಮೇರಿಕಾ ಅಧ್ಯಕ್ಷ ಟ್ರಂಪ್., ಇಂಗ್ಲೆಂಡಿಗೆ ಥೆರೆಸಾ ಮೇ.. ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಅವರೆಷ್ಟರ ಮಟ್ಟಿಗೆ ಅಧಿಕಾರ ಹೊಂದಿದ್ದಾರೆ ?ಎನ್ನುವುದು ಪ್ರಶ್ನೆ. ಇವರೆನ್ನೆಲ್ಲಾ ಆಳುವುದು 'ಹಣ'  ಅಂದರೆ ವಿತ್ತ ಪ್ರಪಂಚದ ಮೇಲೆ ಯಾರು ಹಿಡಿತ ಹೊಂದಿದ್ದಾರೋ ಅವರೇ ನಿಜವಾದ ಪ್ರಭಾವಿಗಳು. ಅವರು ಕಾನೂನು ಸೃಷ್ಟಿಸುತ್ತಾರೆ, ಅವರು ಯುದ್ಧ ಮಾಡಿಸುತ್ತಾರೆ, ಒಂದೇ ಮನೆಯಲ್ಲಿ ಅನ್ಯೋನ್ಯದಿಂದ ಇದ್ದ ಅಣ್ಣ-ತಮ್ಮಂದಿರ ನಡುವೆ ಕಾದಾಟ ತಂದು ಹಾಕುತ್ತಾರೆ, ಜನ ಸಾಮಾನ್ಯನ ಎಷ್ಟು ಭಾಗವಾಗಿ ವಿಭಜಿಸಲು ಸಾಧ್ಯವೋ ಅಷ್ಟು ವಿಭಜಿಸುತ್ತಾರೆ. ಜನ ಸಾಮಾನ್ಯ ಒಡೆದು ಛಿದ್ರವಾದಷ್ಟು ಅವರ ಸಾಮ್ರಾಜ್ಯ ಭದ್ರ. ಮುಂದಿನ ಅವರ ಪೀಳಿಗೆಯ ಭವಿಷ್ಯ ಭದ್ರ. 
ಹಾಗಾದರೆ ಈ 'ಅವರು' ಯಾರು ಅವರಿಗೇನು ಹೆಸರಿಲ್ಲವೇ? 
ಈ ಅವರು ಅವರನ್ನ ಅವರೇ ದೇವರ ದೂತರು ಜಗತ್ತನ್ನ ಆಳಲು ಹುಟ್ಟಿದವರು ಎಂದು ನಂಬಿದವರು ಜಗತ್ತಿನ ಜನಸಂಖ್ಯೆಯ ಒಂದು ಪ್ರತಿಶತಕ್ಕೂ ಕಡಿಮೆ ಸಂಖ್ಯೆಯ ಇವರು ಅದೇ ಜಗತ್ತಿನ ಬಹುಪಾಲು ಸಂಪತ್ತಿನ ಒಡೆಯರು. ಜಗತ್ತಿಗೆ ಸುದ್ದಿ ತಿಳಿಸುವ ಮುಕ್ಕಾಲು ಪಾಲು ಮಾಧ್ಯಮಗಳು ಇವರ ಹಿಡಿತದಲ್ಲಿವೆ. ಅವರೇನು ಬಯಸುತ್ತಾರೆ ಅದನ್ನ ನೀವು ಕೇಳುತ್ತೀರಿ/ ನೋಡುತ್ತಿರಿ, ಅವರು ನೀವೇನು ಸತ್ಯ ಎಂದು ನಂಬಬೇಕು ಎಂದು ಬಯಸುತ್ತಾರೆ ಅದನ್ನ ನೀವು ಸತ್ಯ ಎಂದು ನಂಬುತ್ತೀರಿ. ನಿಮಗೆ ಬರುವ ಮಾಹಿತಿ ತಮಗೆ ಬೇಕಾದ ಹಾಗೆ ತಿರುಚಿ ನೀಡಲಾಗುತ್ತದೆ. ಯಾವುದೊ ಒಂದು ದೇಶವನ್ನ ಅಥವಾ ಸಂಸ್ಥೆ ಅಥವಾ ವ್ಯಕ್ತಿಯನ್ನ ತಮಗೆ ಬೇಕಾದ ಹಾಗೆ ಜಗತ್ತಿನ ಮುಂದೆ ಬಿಂಬಿಸುವ ತಾಕತ್ತು ಇವು ಹೊಂದಿವೆ. ಹೀಗೆ ಜಗತ್ತನ್ನ ತಮ್ಮಿಚ್ಚೆಗೆ ಕುಣಿಸುವ ಬೆರಳೆಣಿಕೆ ಮನೆತನಗಳಲ್ಲಿ  ರೋತ್ಸ್ ಚೈಲ್ಡ್. ಬ್ರೂಸ್, ಕ್ಯಾವೆಂಡಿಷ್, ಹ್ಯಾನೋವರ್, ಕ್ರುಪ್, ರೋಕೆ ಫಿಲ್ಲರ್, ವಾರ್ಬುರ್ಗ್, ಡೇ ಮೆಡಿಸಿ  ಪ್ರಮುಖವಾದವು. ಮೊದಲೇ ಹೇಳಿದಂತೆ ಇವರದು 'ಎಲೈಟ್ ಕ್ಲಬ್ ' ಇಲ್ಲಿನ ಸದಸ್ಯರಾಗುವುದು ಸಾಧ್ಯವೇ ಇಲ್ಲ. ಜಗತ್ತಿನ ಬಹುಪಾಲು ವ್ಯಾಪಾರ -ವಹಿವಾಟು ಇವರ ಅಂಕೆಯಲ್ಲಿವೆ. ಜಗತ್ತಿನ ಬಹುಪಾಲು ದೇಶಗಳಲ್ಲಿ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿ ಯಾರಾಗಬೇಕು ಎನ್ನುವುದನ್ನ ನಿರ್ಧರಿಸುವುದು ಇವರು. ಜಗತ್ತಿನಲ್ಲಿ ಯುದ್ಧ ಸೃಷ್ಟಿಸುವುದು ಇವರು, ಶಾಂತಿ ಮಂತ್ರ ಜಪಿಸುವುದು ಇವರು, ತೊಟ್ಟಿಲು ತೂಗುವುದು ಮಗುವನ್ನೂ ಹಿಂಡುವುದು ಎರಡೂ ಇವರ ಕೆಲಸ. ಮೊದಲ ಪ್ಯಾರಾದಲ್ಲಿ ಹೇಳಿದ ನಿಮ್ಮ ಯಾಂತ್ರಿಕ ಬದುಕ ಸೃಷ್ಟಿಸಿದವರು ಇವರು. ನಿಮಗೆ ಚಿಂತಿಸಲು ಆತ್ಮಾವಲೋಕನ ಮಾಡಿಕೊಳ್ಳಲು ಸಮಯ ನೀಡದವರು ಇವರು. 
ಅವರು ಅಷ್ಟು ಬಲಿಷ್ಠರಾಗಲು ಕಾರಣವೇನು? ಅಷ್ಟು ಬಲಿಷ್ಠರಾಗಿದ್ದು ಹೇಗೆ? 
ವಿತ್ತ ಪ್ರಪಂಚದ  ಮೇಲೆ ಹಿಡಿತ: ಜಗತ್ತಿಗೆ ಜಗತ್ತೇ ಒಂದು ಸುಳ್ಳನ್ನ ಸತ್ಯ ಎಂದು ನಂಬುತ್ತಾ ಬಂದಿದೆ  ಅದೇನೆಂದರೆ ಅಮೇರಿಕಾದ ಫೆಡರಲ್ ಬ್ಯಾಂಕ್ ಅಮೇರಿಕಾ ಸರಕಾರದ ಬ್ಯಾಂಕ್ ಎನ್ನವುದು. ನಿಜವಾಗಿ ಅದೊಂದು ಖಾಸಗಿ ಬ್ಯಾಂಕ್. ಅದು ಕೇವಲ ಬ್ಯಾಂಕ್ ಅಲ್ಲ ಅದು ಬ್ಯಾಂಕುಗಳಿಗೆ ಬ್ಯಾಂಕರ್. ರೋತ್ಸ್ ಚೈಲ್ಡ್ ಮನೆತನ ಇದರ ಒಡೆಯ. ಅಮೇರಿಕಾದ ಆರ್ಥಿಕತೆ ಫೆಡರಲ್ ಬ್ಯಾಂಕ್ ಮತ್ತು ಅದು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ಲಂಡನ್ ನಗರ ಜಗತ್ತಿನ ಹಣಕಾಸು ರಾಜಧಾನಿ ಎನ್ನುವ ಹೆಸರು ಪಡೆದಿದೆ ಅಲ್ಲಿನ ಬಹುಪಾಲು ಎಲ್ಲಾ ಸಂಸ್ಥೆಗಳು ಖಾಸಗಿಯಾದವು, ಬ್ರಿಟನ್ ಸರಕಾರ ಅವುಗಳ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ. ವ್ಯಾಟಿಕನ್ ಸಿಟಿ ಎನ್ನುವ ಜಗತ್ತಿನ ಅತ್ಯಂತ ಪುಟ್ಟ ದೇಶ ಜಗತ್ತಿನ ಮೊದಲ ಇಪ್ಪತ್ತು ಶ್ರೀಮಂತ ದೇಶಗಳ ಪಟ್ಟಿಗೆ ಸೇರುತ್ತದೆ. ವ್ಯಾಟಿಕನ್ ಸಿಟಿ ಇಟಲಿಯಲ್ಲಿದೆ ಆದರೆ ಅದು ಇಟಲಿಯ ಕಂಟ್ರೋಲ್ ನಲ್ಲಿ ಇಲ್ಲ. ಜಗತ್ತಿನ ಬಹುಪಾಲು ಸೆಂಟ್ರಲ್ ಬ್ಯಾಂಕ್ ಅಥವಾ ರಿಸರ್ವ್ ಬ್ಯಾಂಕ್ಗಳಿಗೆ ಸಾಲ ನೀಡುವ ಇವರು ಒಂದರ್ಥದಲ್ಲಿ ಜಗತ್ತಿನ ಎಲ್ಲಾ ಪ್ರಮುಖ ದೇಶಗಳಲ್ಲಿ ನೆಡೆಯುವ ವ್ಯಪಾರ ವಹಿವಾಟು ಕಂಟ್ರೋಲ್ ಮಾಡುತ್ತಾರೆ. ಅಲ್ಲಿನ ಅಧ್ಯಕ್ಷನ ಆಯ್ಕೆ ಇವರ ಮರ್ಜಿಯಲ್ಲಿರುತ್ತದೆ. ಅಲ್ಲಿನ ಬ್ಯಾಂಕಿನ ಬಡ್ಡಿ ದರ ಇವರು ನಿರ್ಧರಿಸುತ್ತಾರೆ . 
ಮಾಧ್ಯಮಗಳ ಮೇಲೆ ಹಿಡಿತ: ಜಗತ್ತಿನ ಬಹುಪಾಲು ಮಾಧ್ಯಮಗಳು ಇವರ ಹಿಡಿತದಲ್ಲಿವೆ. ಅಮೇರಿಕಾದ ದೇಶದ 90 ಪ್ರತಿಶತ ವಾಹಿನಿಗಳು ಇವರ ಒಡೆತನದಲ್ಲಿವೆ ಅವರೇನು ಬಿತ್ತರಿಸುತ್ತಾರೆ ಅದನ್ನ ಜನ ಸಾಮಾನ್ಯ ನೋಡಬೇಕು ನೋಡಿದ್ದ ನಂಬಬೇಕು. 
ಶೈಕ್ಷಣಿಕ ಸಂಸ್ಥೆಗಳ ಮೇಲೆ ಹಿಡಿತ: ಇವತ್ತು ನಮ್ಮ ಪಠ್ಯದಲ್ಲಿ ಏನಿರಬೇಕು? ಎಂದು ಅವರು ನಿರ್ಧರಿಸುತ್ತಾರೆ. ಅವರಿಗೆ ಯೋಚಿಸುವ, ಪ್ರಶ್ನಿಸುವ ಜನ ಬೇಕಿಲ್ಲ. ಚಿಂತಿಸುವ ಜನ ಅವರ ಸಾಮ್ರಾಜ್ಯಕ್ಕೆ ಕಂಟಕ ಎನ್ನವುದು ಅವರಿಗೆ ಗೊತ್ತಿದೆ. ಅವರಿಗೆ ಬೇಕಿರುವುದು ಅವರು ಹೇಳುವ ಕೆಲಸಗಳ ' ಯಸ್ ಸರ್ ' ಎಂದು ಮರು ಪ್ರಶ್ನಿಸದೆ ಜಾರಿ ಮಾಡುವ ರೋಬಾಟ್ ಗಳು. ನಮ್ಮ ಸುತ್ತ ತಯಾರಾಗುತ್ತಿರುವ  ಚಿಂತನಾ ಶಕ್ತಿಯಿಲ್ಲದ ಯುವ ಜನತೆ ಇದಕ್ಕೆ ಸಾಕ್ಷಿ. 
ಹೀಗೆ ಒಟ್ಟು ನಮ್ಮ ಚಿಂತನೆ ನಮ್ಮ ಬದುಕ ಹೇಗೆ ಬದುಕಬೇಕು ಎಂದು ಅವರು ನಿರ್ಧರಿಸುತ್ತಾರೆ. ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವರ ಅಣತಿಯಂತೆ ದುಡಿಯುತ್ತಿರಬೇಕು ತಿಂಗಳಿಗೊಮ್ಮೆ ಅವರು ಹಾಕುವ ಹಣವೆನ್ನುವ ಪೇಪರ್ ತುಂಡಿಗೆ ಕಾಯಬೇಕು. ಆ ಪೇಪರ್ ತುಂಡಿನ ಮೇಲೆ ಅವರಿಷ್ಟದ ಸಂಖ್ಯೆ ಮುದ್ರಿಸುವ ತಾಕತ್ತು ಅವರಿಗಿದೆ. ಇನ್ನೊಂದು ದಶಕದಲ್ಲಿ  ಪೂರ್ಣ ಜಗತ್ತಿನ ಮೇಲೆ ಹಿಡಿತ ಸಾಧಿಸುವುದು ಅವರ ಉದ್ದೇಶ. 
ವ್ಯವಸ್ಥೆಯ ಬದಲಾಯಿಸಲು ನಾವೇನು ಮಾಡಬೇಕು ? 
ಇಂದು ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ನಮಗೆ ಹಣಕಾಸು ವ್ಯವಸ್ಥೆ ಬೇಕಿಲ್ಲ ಅಷ್ಟರಮಟ್ಟಿಗೆ. ಪ್ರಕೃತ್ತಿಯಲ್ಲಿ ನೀರಿದೆ, ಆಹಾರವಿದೆ, ತೈಲವಿದೆ ಪ್ರಕೃತ್ತಿ ಎಂದೂ ಅದಕ್ಕೆ ಹಣ ಕೇಳಿಲ್ಲ. ಅಂದರೆ ಪುಕ್ಕಟೆ ಸಿಗುವ ವಸ್ತುಗಳ ಮೇಲೆ ಬೆಲೆ ಹೇರಿ ಅದಕ್ಕೂ ತೆರಿಗೆ ಹಾಕಿ ಸಾಧಿಸುವುದಾದರೂ ಏನು? ಅವರಿಗೆ ಬೇಕಿರುವುದು ಜಗತ್ತಿನ ಜನತೆಯ ಮೇಲೆ ಕಂಟ್ರೋಲ್ ನಾವು ಹುಟ್ಟರಿರುವುದೇ ಜಗತ್ತನ್ನ ಆಳಲು ಎನ್ನುವ ಅಹಂಭಾವ ಇಷ್ಟೆಲ್ಲಾ ಮಾಡಿಸುತ್ತಿದೆ . ಜಗತ್ತಿನ ಪ್ರತಿಯೊಬ್ಬ ಪ್ರಜೆಯೂ ಸುಖವಾಗಿ ಬಾಳಲು ಬೇಕಾಗಿರುವ ಸಂಪತ್ತು ಇಲ್ಲಿದೆ ಆದರೆ ಅದು ಕೆಲವೇ ಕೆಲವು ವ್ಯಕ್ತಿಗಳ ಮನೆಯಲ್ಲಿ ಕೊಳೆಯುತ್ತಾ ಬಿದ್ದಿದೆ. ತಮ್ಮ ಹೆಚ್ಚುಗಾರಿಕೆ ಪ್ರದರ್ಶಿಸಲು ಹಳೆಯ ವಿತ್ತ ವ್ಯವಸ್ಥೆಗೆ ಹೊಂದಿಕೊಳ್ಳಲಾಗಿದೆ. ಇದರ ಬದಲಾವಣೆಗೆ ಇರುವುದೊಂದೆ ಮಂತ್ರ ಒಗ್ಗಟ್ಟು. ನಾವೆಲ್ಲಾ ಒಂದಾದರೆ? ಯೋಚಿಸಿ ನೋಡಿ ನಾವು 99 ಪ್ರತಿಶತ ಅವರು ಕೇವಲ 1 ಪ್ರತಿಶತ. ನೂರಾರು ಕುರಿಯ ಕಾಯಲು ಒಬ್ಬ ಮನುಷ್ಯ ಸಾಕು ಅಲ್ವಾ? ಹಾಗಾಗಿದೆ ನಮ್ಮ ಸ್ಥಿತಿ. ಜಾತಿ ಧರ್ಮ ಭಾಷೆ  ಹೀಗೆ ನೂರಾರು ವಿಧದಲ್ಲಿ ಒಡೆದು ಹೋಳಾಗಿರುವ ನಮಗೆ ಒಗ್ಗಟ್ಟಾಗಲು ಸಾಧ್ಯವೇ? ಅದು ಸಾಧ್ಯವಾದರೆ ಬದುಕು ಹಸನಾಗುತ್ತದೆ. ಇಂದು ಹೋರಾಟ ಆಗಬೇಕಿರುವುದು ಆರ್ಥಿಕ ಅಸಮಾನತೆ ಬಗ್ಗೆ. ಮೂಲ ಕಾರಣದಿಂದ ನಮ್ಮನ್ನ ದೂರವಾಗಿಸಿ ನಮ್ಮ ನಮ್ಮಲ್ಲಿ ಕಚ್ಚಾಡಿಸುವ 'ಅವರಿಗೆ ' ಉತ್ತರಿಸೋಣವೇ? 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com