ನವದೆಹಲಿ: ಕಡಿಮೆ ಮುಖ ಬೆಲೆಯ ನೋಟುಗಳ ಕೊರತೆಯನ್ನು ನಿವಾರಿಸಲು 200 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಆರ್ ಬಿಐಯ ಕೇಂದ್ರ ನಿರ್ದೇಶಕರ ಮಂಡಳಿಯ ಶಿಫಾರಸಿನಂತೆ ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ, 200 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಒಪ್ಪಿಗೆ ನೀಡಿದೆ.
ಹೀಗಾಗಿ ಸದ್ಯದಲ್ಲಿಯೇ 200 ರೂಪಾಯಿ ನೋಟು ಚಲಾವಣೆಗೆ ಬರಲಿದೆ.
ದೇಶದಲ್ಲಿ ಕರೆನ್ಸಿಗಳ ಪರಿಸ್ಥಿತಿ ಸುಧಾರಣೆಯಾಗುವವರೆಗೆ 200 ರೂಪಾಯಿ ನೋಟುಗಳನ್ನು ಆರ್ ಬಿಐ ಮುದ್ರಿಸಲಿದೆ.
ಕಳೆದ ವರ್ಷ ನವೆಂಬರ್ 9ರಂದು ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ನಿಲ್ಲಿಸಿದ ನಂತರ ಆರ್ ಬಿ 2,000 ನೋಟುಗಳನ್ನು ಚಲಾವಣೆಗೆ ತಂದಿತ್ತು. ಅಲ್ಲದೆ ಇನ್ನಷ್ಟು ಸುರಕ್ಷತೆಯೊಂದಿದೆ 500 ರ ಮುಖಬೆಲೆಯನ್ನು ಹೊಂದಿದ ಹೊಸ ನೋಟುಗಳನ್ನು ಪರಿಚಯಿಸಿತ್ತು.
2,000 ಮುಖಬೆಲೆಯ ನೋಟುಗಳನ್ನು ವಹಿವಾಟುಗಳಿಗೆ ಬಳಸಲು ಉಂಟಾಗುವ ತೊಂದರೆಯನ್ನು 200 ರೂಪಾಯಿ ನೋಟುಗಳು ಚಲಾವಣೆಗೆ ಬಂದರೆ ತಡೆಗಟ್ಟಬಹುದು.
ರಿಸರ್ವ್ ಬ್ಯಾಂಕ್ ಹಂಪೆ ರಥದ ಚಿತ್ರವನ್ನು ಹೊಂದಿರುವ 50ರ ಮುಖಬೆಲೆಯ ಹೊಸ ನೋಟನ್ನು ಚಲಾವಣೆಗೆ ತಂದಿದೆ.