ದ್ವಿಚಕ್ರ ವಾಹನ ವಿಮಾ ಪಾಲಿಸಿ ರದ್ದುಗೊಂಡರೆ ಏನು ಮಾಡಬೇಕು?

ಇತ್ತೀಚೆಗೆ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ನಮ್ಮ ದೇಶದ ರಸ್ತೆಗಳಲ್ಲಿ ಓಡಾಡುವ ಶೇಕಡಾ 60ರಷ್ಟು ವಾಹನಗಳಿಗೆ ವಿಮೆಗಳಿರುವುದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನೀವು ಎಲೆಕ್ಟ್ರಿಸಿಟಿ ಬಿಲ್, ಮೊಬೈಲ್ ಬಿಲ್, ಕ್ರೆಡಿಟ್ ಕಾರ್ಡು ಬಿಲ್ ಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದಿದ್ದರೆ ಏನಾಗುತ್ತದೆ? ದಂಡ ಕಟ್ಟಬೇಕಾಗುತ್ತದೆ, ಇಲ್ಲವೇ ಸೇವೆ ಕಡಿತವಾಗಬಹುದು. ಇದೇ ಕಾನೂನು ರದ್ದುಗೊಂಡ ಅಥವಾ ಅವಧಿ ಮುಗಿದ ದ್ವಿಚಕ್ರ ವಾಹನ ವಿಮಾ ಯೋಜನೆಗಳಿಗೂ ಅನ್ವಯವಾಗುತ್ತದೆ. 
ಸಾಮಾನ್ಯ ವಿಮಾ ಕೌನ್ಸಿಲ್(ಜಿಐಸಿ) ಇತ್ತೀಚೆಗೆ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ನಮ್ಮ ದೇಶದ ರಸ್ತೆಗಳಲ್ಲಿ ಓಡಾಡುವ ಶೇಕಡಾ 60ರಷ್ಟು ವಾಹನಗಳಿಗೆ ವಿಮೆಗಳಿರುವುದಿಲ್ಲ. ಅವುಗಳಲ್ಲಿ ಹೆಚ್ಚಿನವು ದ್ವಿಚಕ್ರ ವಾಹನಗಳು. ಇತ್ತೀಚಿನ ದಿನಗಳಲ್ಲಿ ವಾಹನಗಳಲ್ಲಿ ಹೋಗುವಾಗ ಅಪಘಾತಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಸಂಖ್ಯೆ ಎಚ್ಚರಿಕೆ ಗಂಟೆಯಾಗಿದೆ. ರಸ್ತೆಗಿಳಿಯುವ ವಾಹನಗಳಿಗೆ ವಿಮಾ ಯೋಜನೆಗಳು ಕಡ್ಡಾಯವಾದರೂ ಕೂಡ ವಿಮೆ ಮಾಡಿಸಿಕೊಳ್ಳದಿರುವ ವಾಹನಗಳ ಸಂಖ್ಯೆಯೇ ಭಾರತ ದೇಶದಲ್ಲಿ ಹೆಚ್ಚಿರುವುದು ದುರದೃಷ್ಟಕರ. 
ವಾಹನದೊಟ್ಟಿಗೆ ವಿಮೆಗಳನ್ನು ಆಫರ್ ಮಾಡಿದರೆ ಹೊಸ ಮಾಲೀಕರು ವಿಮೆಗಳನ್ನು ಖರೀದಿಸುತ್ತಾರೆ. ವಿಮೆ ಮಾಡಿಸಿಕೊಳ್ಳದಿರುವವರು ಹೆಚ್ಚಾಗಿ ಹಳೆ ವಾಹನಗಳ ಮಾಲೀಕರು. ಅವರು ಒಂದೋ ವಿಮೆ ಮಾಡಿಸಿಯೇ ಇರುವುದಿಲ್ಲ ಅಥವಾ ನವೀಕರಿಸುವ ಗೋಜಿಗೆ ಹೋಗುವುದಿಲ್ಲ. ರದ್ದುಗೊಂಡ ವಿಮೆಗಳು ವಿಮೆಯನ್ನೇ ಹೊಂದಿಲ್ಲದಿರುವುದಕ್ಕೆ ಸಮ. ಯಾಕೆಂದರೆ ವಿಮೆ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ ಎಲ್ಲಾ ಪ್ರಯೋಜನಗಳು ಮತ್ತು ಹಕ್ಕುಗಳು ಕಳೆದುಹೋಗುತ್ತವೆ.
ನಿಮ್ಮ ದ್ವಿಚಕ್ರ ವಾಹನದ ವಿಮಾ ಪಾಲಿಸಿ ರದ್ದುಗೊಂಡರೆ ಏನಾಗುತ್ತದೆ?
- ನಿಮ್ಮ  ವಿಮಾ ಯೋಜನೆ ರದ್ದುಗೊಂಡು 90 ದಿನಗಳಾದರೆ ನೋ ಕ್ಲೈಮ್ ಬೋನಸ್(ಎನ್ ಸಿಬಿ)ಯನ್ನು ಮುಟ್ಟುಗೋಲು ಹಾಕಲಾಗುತ್ತದೆ. ಮುಂದಿನ ಸರಣಿಯಲ್ಲಿ ನಿಮ್ಮ ವಿಮಾಗಾರರು ಪ್ರೀಮಿಯಂ ಹಣವನ್ನು ಜಾಸ್ತಿ ಮಾಡಬಹುದು. ಅದಕ್ಕೆ ಹೊರತಾಗಿ ತೃತೀಯ ಬಾಧ್ಯತೆಗಳು ಸೇರಿದಂತೆ ಅನೇಕ ತೊಂದರೆಗಳುಂಟಾಗುತ್ತದೆ. ಅದರರ್ಥ, ನಿಮ್ಮ ವಾಹನ ಅಪಘಾತಕ್ಕೀಡಾದರೆ ವಿಮೆ ಪಾಲಿಸಿ ಇಲ್ಲದಿದ್ದರೆ ವಾಹನಕ್ಕೆ ಆದ ಹಾನಿಯನ್ನು ಸರಿಪಡಿಸಲು ಎಲ್ಲಾ ಹಣವನ್ನು ನೀವೇ ನೀಡಬೇಕಾಗುತ್ತದೆ. ಹಾಗಾಗಿ ನಿಮ್ಮ  ವಿಮಾ ಪಾಲಿಸಿಯ ಅವಧಿ ಮುಗಿಯುವ ಮುನ್ನವೇ ದ್ವಿಚಕ್ರ ವಾಹನದ ವಿಮೆಯನ್ನು ನವೀಕರಿಸುವುದು ಉತ್ತಮ.
ದ್ವಿಚಕ್ರ ವಾಹನದ ವಿಮಾ ಪಾಲಿಸಿಯನ್ನು ನವೀಕರಿಸುವುದು ಹೇಗೆ?
-ರದ್ದುಗೊಂಡ ದ್ವಿಚಕ್ರ ವಾಹನದ ಪಾಲಿಸಿಯನ್ನು ನವೀಕರಿಸಲು ಎರಡು ಮಾರ್ಗಗಳಿವೆ. ಆಫ್ ಲೈನ್ ಮತ್ತು ಆನ್ ಲೈನ್.
1. ಆಫ್ ಲೈನ್ ಮಾದರಿ: ವಿಮೆ ಮಾಡಿಸಿಕೊಡುವವರ ಬಳಿ ಖುದ್ದಾಗಿ ಹೋಗಬೇಕು. ಹಿಂದಿನ ವಿಮಾ ಯೋಜನೆಯ ದಾಖಲೆಗಳನ್ನು ಮತ್ತು ಸಂಬಂಧಪಟ್ಟ ಪತ್ರಗಳನ್ನು ವಿಮಾಗಾರರು ಕೇಳಬಹುದು.  ಎಲ್ಲಾ ಪತ್ರಗಳು ಸಿಕ್ಕಿದ ನಂತರ ವಿಮಾಗಾರರು ಪರಿಶೀಲನೆ ನಡೆಸಿ ಅದರಂತೆ ವಿಮಾ ಪಾಲಿಸಿಯನ್ನು ನವೀಕರಿಸುತ್ತಾರೆ.
2. ಆನ್ ಲೈನ್ ಮಾದರಿ: ಆನ್ ಲೈನ್ ನಲ್ಲಿ ವಿಮೆಗಳನ್ನು ನವೀಕರಿಸುವುದು ಸುಲಭ ಮತ್ತು ಬೇಗನೆ ಆಗುವ ಪ್ರಕ್ರಿಯೆ. ವಿಮಾಗಾರರ  ವೆಬ್ ಸೈಟ್ ಗೆ ಲಾಗ್ ಆನ್ ಆಗಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆ ಮುಗಿದ ನಂತರ ವಿಮಾಗಾರರು ನಿಮ್ಮ ಪಾಲಿಸಿಯನ್ನು ನವೀಕರಿಸಿ ಇಮೇಲ್ ಮಾಡುತ್ತಾರೆ. 
ಸಾಂಪ್ರದಾಯಿಕ ಮಾದರಿಯಾದ ಆಫ್ ಲೈನ್ ನಲ್ಲಿಯಾದರೆ ವಿಮಾ ಪಾಲಿಸಿಯನ್ನು ನವೀಕರಿಸುವ ಮುನ್ನ ವಿಮಾಗಾರರು ನಿಮ್ಮ ವಾಹನವನ್ನು ತಪಾಸಣೆ ಮಾಡಬಹುದು. ಆದರೆ ಆನ್ ಲೈನ್ ನಲ್ಲಿ ಹಾಗಿರುವುದಿಲ್ಲ. 
ದೀರ್ಘಾವಧಿಯ ದ್ವಿಚಕ್ರ ವಾಹನ ವಿಮಾ ಪಾಲಿಸಿಗಳನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?
ಕೆಲವೊಮ್ಮೆ ವಿಮಾ ಪಾಲಿಸಿಗಳನ್ನು ನವೀಕರಿಸಲು ಮರೆತುಹೋಗಿ ಪಾಲಿಸಿ ರದ್ದುಗೊಳ್ಳಬಹುದು. ಇಂತಹ ಪರಿಸ್ಥಿತಿಗಳನ್ನು ಉಂಟಾಗದಂತೆ ನೋಡಿಕೊಳ್ಳಲು, ದೀರ್ಘಾವಧಿಯ ದ್ವಿಚಕ್ರ ವಾಹನ ವಿಮಾ ಪಾಲಿಸಿಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಅಂತವು ಮೂರು ವರ್ಷಕ್ಕೆ ಒಮ್ಮೆ ಮಾಡಿಸಿಕೊಳ್ಳುವ ಪಾಲಿಸಿಗಳಿರುತ್ತವೆ.
ದೀರ್ಘಾವಧಿಯ ವಿಮಾ ಪಾಲಿಸಿಗಳ ಕೆಲವೊಂದು ಉಪಯೋಗಗಳು ಇಂತಿವೆ: ಸುಲಭ- ನವೀಕರಿಸುವ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗಬಹುದು. ಕೆಲವೊಮ್ಮೆ ನೆನಪಿನಲ್ಲಿದ್ದರೂ ಕೂಡ ಸರಿಯಾದ ಸಮಯಕ್ಕೆ ಪಾಲಿಸಿಯನ್ನು ನವೀಕರಿಸಲು ಸಾಧ್ಯವಾಗದಿರಬಹುದು. ದೀರ್ಘಾವಧಿಯವರೆಗೆ ಮಾಡಿಸಿಕೊಂಡರೆ ಪ್ರತಿವರ್ಷ ನವೀಕರಿಸುವ ಅಗತ್ಯವಿರುವುದಿಲ್ಲ.
ನವೀಕರಿಸದಿಲ್ಲದಿರುವ ಅಪಾಯದಿಂದ ರಕ್ಷಣೆ: ವಿಮೆಯ ಅವಧಿ ಮುಗಿದರೆ ಅದರಿಂದ ಅಪಾಯಗಳೇ ಹೆಚ್ಚು. ಉದಾಹರಣೆಗೆ ವಾಹನವೊಂದು ಅಪಘಾತಕ್ಕೀಡಾಯಿತೆಂದಿಟ್ಟುಕೊಳ್ಳಿ. ಆಗ ಮಾಲೀಕರ ಬಳಿಯಿರುವ ವಿಮಾ ಪಾಲಿಸಿ ಮೌಲ್ಯಯುತವಾಗಿರದಿದ್ದರೆ ಎಲ್ಲಾ ನಷ್ಟವನ್ನು ಪಾಲಿಸಿದಾರರೇ ಭರಿಸಬೇಕಾಗುತ್ತದೆ. ದೀರ್ಘಾವಧಿಯ ಪಾಲಿಸಿ ನಿಮ್ಮ ಬಳಿಯಿದ್ದರೆ ಆ ತೊಂದರೆ ಇರುವುದಿಲ್ಲ.
ರಿಯಾಯಿತಿ: ದೀರ್ಘಾವಧಿ ಪಾಲಿಸಿಗಳಲ್ಲಿ ವಿಮಾಗಾರರಿಗೆ ಆಡಳಿತಾತ್ಮಕ ಮತ್ತು ಪಾಲಿಸಿ ಜಾರಿಯ ವೆಚ್ಚ ಕಡಿಮೆಯಾಗುವುದರಿಂದ ಉಳಿತಾಯದಲ್ಲಿ ಸ್ವಲ್ಪ ಮೊತ್ತವನ್ನು ವಿಮಾ ಅರ್ಜಿದಾರರಿಗೆ ಲಾಭದಾಯಕ ರಿಯಾಯಿತಿ ರೂಪದಲ್ಲಿ ನೀಡುತ್ತಾರೆ.
ಬದಲಾಗದಿರುವ ಪ್ರೀಮಿಯಂ ದರಗಳು: ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ) ಮೂರನೇ ವ್ಯಕ್ತಿಯ ಪ್ರೀಮಿಯಂ ದರವನ್ನು ನಿರ್ಧಾರ ಮಾಡುತ್ತದೆ. ಅದು ಸಾಮಾನ್ಯವಾಗಿ ಪ್ರತಿವರ್ಷ ಸುಂಕ ದರವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಿಸುತ್ತದೆ. ವಿಮಾಗಾರರು ಕೂಡ ಪ್ರೀಮಿಯಂ ಮೊತ್ತವನ್ನು ಕಾಲ ಕಾಲಕ್ಕೆ ಹೆಚ್ಚಿಸುತ್ತಿರುತ್ತಾರೆ. ನೀವು ದೀರ್ಘಾವಧಿಯ ವಿಮಾ ಪಾಲಿಸಿಗಳನ್ನು ಹೊಂದಿದ್ದರೆ ಪ್ರತಿವರ್ಷ ಥರ್ಡ್ ಪಾರ್ಟಿ ಪ್ರೀಮಿಯಂ ಹೆಚ್ಚಳದಿಂದ ತಪ್ಪಿಸಿಕೊಳ್ಳಬಹುದು.
ಮುಕ್ತಾಯ: ಇಂದು ಅನೇಕ ವಿಮಾ ಕಂಪೆನಿಗಳು ನಿಮ್ಮ ಪಾಲಿಸಿಯನ್ನು ನವೀಕರಿಸಿಕೊಳ್ಳಲು ಹಲವು ಮುಕ್ತ ವಿಧಾನಗಳನ್ನು ಒದಗಿಸುತ್ತವೆ.ಕಾನೂನು ಮತ್ತು ಹಣಕಾಸು ಸಮಸ್ಯೆಗಳು ತಲೆದೋರುವಾಗ ವಿಮಾ ಪಾಲಿಸಿಯನ್ನು ರದ್ದುಪಡಿಸಿಕೊಳ್ಳದೆ ಜಾಣ್ಮೆಯಿಂದ ಬಳಸಿಕೊಳ್ಳುವುದು ಮುಖ್ಯವಾಗುತ್ತದೆ.
ಆಘಾತಕಾರಿ ಅಂಶಗಳು
  • 2016ರ ಆರಂಭದ 6 ತಿಂಗಳು ಕೇರಳದ ಕೊಚ್ಚಿಯಲ್ಲಿ ಶೇಕಡಾ 79 ಬೈಕ್ ಅಪಘಾತಗಳು ಸಂಭವಿಸಿವೆ.
  •   2015ರಲ್ಲಿ 36,803 ಜನರು ಮೃತಪಟ್ಟಿದ್ದು, 13,5343 ಜನರು ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
  •  ದ್ವಿಚಕ್ರ ವಾಹನ ಅಪಘಾತದಿಂದ ಪ್ರತಿದಿನ ಸರಿಸುಮಾರು 94 ಜನರು ಸಾವಿಗೀಡಾಗುತ್ತಿದ್ದಾರೆ ಎಂದು 2013ರ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com