ನೋಟು ನಿಷೇಧ ನಂತರ ಸಹಕಾರಿ ಬ್ಯಾಂಕ್ ದಾಖಲೆಗಳನ್ನು ತಿರುಚಲಾಗಿದೆ: ತೆರಿಗೆ ಅಧಿಕಾರಿಗಳು

ನೋಟು ನಿಷೇಧದ ನಂತರ ದೇಶದ ಹಲವು ಸಹಕಾರಿ ಬ್ಯಾಂಕ್ ದಾಖಲೆಗಳಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆದು ದಾಖಲೆಗಳನ್ನು ತಿರುಚಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನೋಟು ನಿಷೇಧದ ನಂತರ ದೇಶದ ಹಲವು ಸಹಕಾರಿ ಬ್ಯಾಂಕ್ ದಾಖಲೆಗಳಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆದು ದಾಖಲೆಗಳನ್ನು ತಿರುಚಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪತ್ರ ಬರೆದಿದೆ.

ನೋಟು ನಿಷೇಧದ ನಂತರ ಸಹಕಾರಿ ಬ್ಯಾಂಕ್ ಗಳಲ್ಲಿ ತೆರಿಗೆ ಇಲಾಖೆ ನಡೆಸಿದ ತನಿಖೆಯಿಂದ ಬಹು ಕೋಟಿ ರೂಪಾಯಿಗಳ ಮೊತ್ತದ ಭ್ರಷ್ಟಾಚಾರ ನಡೆದಿದೆ.  ಬ್ಯಾಂಕ್ ಖಾತೆಗಳಲ್ಲಿ ಭಾರಿ ಮೊತ್ತದ ವ್ಯತ್ಯಾಸ ಕಂಡು ಬರುತ್ತಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ.

ಮುಂಬಯಿ ಮತ್ತು ಪುಣೆ ಸಹಕಾರಿ ಬ್ಯಾಂಕ್ ಗಳಲ್ಲಿ 113 ಕೋಟಿ ರು ಹಳೆಯ ನೋಟುಗಳ ಹೆಚ್ಚುವರಿ ಕಪ್ಪು ಹಣ ಪತ್ತೆಯಾಗಿದೆ.

ಪುಣೆ ಬ್ಯಾಂಕ್ ತನ್ನ ಖಾತೆಯಲ್ಲಿ 242 ಕೋಟಿ ರು ಹಣ ಇರುವುದಾಗಿ ಆರ್ ಬಿ ಐ ಗೆ ವರದಿ ಮಾಡಿದೆ. ಆದರೆ ಬ್ಯಾಂಕ್ ನಲ್ಲಿದ್ದದ್ದು 141 ಕೋಟಿ ರು ಮಾತ್ರ. ಉಳಿದ 101.07 ಕೋಟಿ ರು ಹಣವನ್ನು ಡಿಸೆಂಬರ್ 23 ರಂದು ಈ ಬ್ಯಾಂಕ್ ತನ್ನ ಖಾತೆಗೆ ಸೇರಿಸಿದೆ. ಇನ್ನು ಮುಂಬಯಿ ಬ್ಯಾಂಕ್ ನಲ್ಲೂ ಕೂಡ ಇದೇ ರೀತಿಯ ಘಟನೆ ನಡೆದಿದ್ದು, 11,89 ಕೋಟಿ ಹೆಚ್ಚುವರಿ ಹಣ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಈ ಎರಡು ಬ್ಯಾಂಕ್ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ತಿಳಿದು ಬಂದಿದೆ.

ಡಿಸೆಂಬರ್ 31 ರೊಳಗೆ ಎಲ್ಲಾ ಬ್ಯಾಂಕ್ ಗಳು ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಆರ್ ಬಿ ಐ ಗೆ ಡೆಪಾಸಿಟ್ ಮಾಡುವಂತೆ ತಿಳಿಸಿತ್ತು. ಈ ಸಂಬಂಧ ಡಿಸೆಂಬರ್ 30 ರಂದು ಸುತ್ತೋಲೆ ಹೊರಡಿಸಿತ್ತು.

ನೋಟು ನಿಷೇಧದ ನಂತರ ಕಪ್ಪು ಹಣವನ್ನು ಬಿಳಿಯನ್ನಾಗಿಸುವ ಸಲುವಾಗಿ ಸಹಕಾರಿ ಬ್ಯಾಂಕ್ ಗಳು ಸಹಾಯ ಮಾಡಿವೆ, ತೆರಿಗೆ ಇಲಾಖೆ ಸಮೀಕ್ಷೆ ನಂತರ ಈ ಮಾಹಿತಿ ಬಹಿರಂಗವಾಗಿದೆ. ಈ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದ್ದು, ನೋಟೀಸ್ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಹಕಾರಿ ಬ್ಯಾಂಕ್ ಗಳು ಶೀಘ್ರ ಹಣ ಮಾಡುವ ಆಸೆಯಿಂದಾಗಿ ಸಾವಿರಾರು ಕೋಟಿ ಕಪ್ಪು ಹಣವನ್ನು ಬಿಳಿಯನ್ನಾಗಿ ಮಾಡಿ ಕಮಿಷನ್ ಪಡೆಯುವ ಸಾಧ್ಯತೆಯಿದ್ದು, ಈ ಸಂಬಂಧ ಗಂಭೀರವಾಗಿ ನಿಗಾ ವಹಿಸಬೇಕೆಂದು ಆದಾಯ ತೆರಿಗೆ ಇಲಾಖೆ ತಿಳಿಸಿತ್ತು. ಇಂಥ ಅನೇಕ ಸಂಗತಿಗಳು ತೆರಿಗೆ ಇಲಾಖೆ ಗಮನಕ್ಕೆ ಬಂದಿದ್ದು, ಹಣಕಾಸು ಇಲಾಖೆಗೆ ಈ ಸಂಬಂಧ ವರದಿ ನೀಡಿದ್ದು, ಸೆಂಟ್ರಲ್ ಬ್ಯಾಂಕ್ ಈ ಬ್ಯಾಂಕ್ ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com