ಧಾರ್ಮಿಕ ಸಂಸ್ಥೆಗಳು ಪೂರೈಸುವ ಆಹಾರದ ಮೇಲೆ ಜಿಎಸ್ ಟಿ ಇಲ್ಲ: ಹಣಕಾಸು ಸಚಿವಾಲಯ

ಧಾರ್ಮಿಕ ಕೇಂದ್ರಗಳು ಜನರಿಗೆ ಪೂರೈಸುವ ಉಚಿತ ಊಟ ಪೂರೈಕೆ ಮೇಲೆ ಸರಕು ಮತ್ತು ಸೇವಾ ತೆರಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಧಾರ್ಮಿಕ ಕೇಂದ್ರಗಳು ಜನರಿಗೆ ಪೂರೈಸುವ ಉಚಿತ ಊಟ ಪೂರೈಕೆ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ ಹಣಕಾಸು ಸಚಿವಾಲಯ ಇಂತಹ ಆಹಾರಗಳ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸಿಲ್ಲ ಎಂದು ಹೇಳಿದೆ.
ನಿನ್ನೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹಣಕಾಸು ಸಚಿವಾಲಯ, ದೇವಸ್ಥಾನ, ಮಸೀದಿ, ಚರ್ಚುಗಳು ಮತ್ತು ಗುರುದ್ವಾರಗಳಲ್ಲಿ ಪ್ರಸಾದ ರೂಪದಲ್ಲಿ ನೀಡುವ ಆಹಾರಗಳ ಮೇಲೆ ಯಾವುದೇ ಕೇಂದ್ರ, ರಾಜ್ಯ ಅಥವಾ ಇಂಟಿಗ್ರೇಟೆಡ್ ಜಿಎಸ್ಟಿ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಸಾದಗಳಿಗೆ ಬಳಸುವ ಕೆಲವು ಪದಾರ್ಥಗಳು ಮತ್ತು ಸೇವೆಗಳ ಮೇಲೆ ಹೊಸ ತೆರಿಗೆ ವಿಧಾನದಲ್ಲಿ ತೆರಿಗೆ ವಿಧಿಸಲಾಗುವುದು. ಸಕ್ಕರೆ, ತರಕಾರಿ, ಎಣ್ಣೆ, ತುಪ್ಪ, ಬೆಣ್ಣೆ, ಸಾಗಾಟ ವೆಚ್ಚಗಳಿಗೆ ತೆರಿಗೆ ಹೇರಲಾಗುತ್ತದೆ.
ಈ ವಸ್ತುಗಳೆಲ್ಲ ಹಲವು ಉಪಯೋಗಗಳನ್ನು ಹೊಂದಿವೆ. ಹಾಗಾಗಿ ಜಿಎಸ್ಟಿಯಡಿ ಕೆಲವು ವಸ್ತುಗಳಿಗೆ ಪ್ರತ್ಯೇಕ ತೆರಿಗೆ ವಿಧಿಸುವುದು ಕಷ್ಟವಾಗುತ್ತದೆ. ಜಿಎಸ್ ಟಿ ಬಹು ಹಂತದ ತೆರಿಗೆ ವಿಧಾನವಾಗಿರುವುದರಿಂದ ಬಳಕೆ-ಆಧಾರಿತ ವಿನಾಯತಿ ಅಥವಾ ವಿನಾಯಿತಿ ಬಹಳ ಕಷ್ಟವಾಗುತ್ತದೆ. ಹೀಗಾಗಿ ಜಿಎಸ್ ಟಿ ವಿನಾಯ್ತಿ ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಸಾದ ತಯಾರಿಸಲು ಬೇಕಾಗುವ ವಸ್ತುಗಳು ಮತ್ತು ಸೇವೆಗಳಿಗೆ ತೆರಿಗೆ ವಿನಾಯ್ತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಮೊನ್ನೆ ಜುಲೈ 2ರಂದು ಕೇಂದ್ರ ಆಹಾರ ಮತ್ತು ಸಂಸ್ಕರಣಾ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್, ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಲಂಗರ್ ಸೇವೆ ಅಥವಾ ಅಡುಗೆ ಮನೆಯ ಆಹಾರದ ಮೇಲೆ ತೆರಿಗೆ ವಿನಾಯ್ತಿ ನೀಡುವಂತೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ ಮನವಿಯನ್ನು ಪುರಸ್ಕರಿಸುವಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com