ಕಳೆದೊಂದು ವಾರದಿಂದ ಸೌದಿ ಸೇರಿದಂತೆ ಮಾಲ್ಡೀವ್ಸ್,ಲಿಬಿಯಾ, ಈಜಿಪ್ಟ್, ಯೆಮೆನ್, ಬಹರೈನ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ತಮ್ಮ ಪಕ್ಕದಲ್ಲೇ ಇರುವ ಕತಾರ್ ದೇಶದ ಮೇಲೆ ಮುನಿಸಿಕೊಂಡಿವೆ. ಮುನಿಸಿ ಕೊಳ್ಳುವುದಷ್ಟೇ ಅಲ್ಲದೆ ಎಲ್ಲಾ ರೀತಿಯ ರಾಜನೀತಿಕ ಸಂಬಂಧ ಕಡಿದುಕೊಂಡು ಕತಾರ್ ಮೇಲೆ ಬಹಿಷ್ಕಾರ ಹಾಕಿವೆ. ಕತಾರ್ ದೇಶಕ್ಕೆ ಆಹಾರ ಪದಾರ್ಥದ ಅರ್ಧದ ಆಜುಬಾಜು ಸರಬರಾಜು ಆಗುವುದು ಸೌದಿಯ ಮೂಲಕ. ಸೌದಿ ಇದೀಗ ತನ್ನ ಸರಹದ್ದು ಮುಚ್ಚಿದೆ. ಹೀಗಾಗಿ ಕತಾರ್ ಗೆ ಹೋಗುತ್ತಿದ್ದ ಆಹಾರ ಪದಾರ್ಥಕ್ಕೆ ಕಡಿವಾಣ ಬಿದ್ದಿದೆ. ಕತಾರ್ ನಲ್ಲಿ ಸಣ್ಣ ಮಟ್ಟದ ಸಂಚಲನ ಶುರುವಾಗಿದೆ. ಈ ಸಮಯವನ್ನ ಬಳಸಿಕೊಂಡು ಇರಾನ್ ಕತಾರ್ ದೇಶಕ್ಕೆ ಆಹಾರ ಪದಾರ್ಥದ ನೆರವು ನೀಡಿ ತನ್ನ ರಾಜಕೀಯ ನಿಪುಣತೆ ಮೆರೆದಿದೆ. ಇದೆಲ್ಲಾ ಕಳೆದ ವಾರದಿಂದ ಇವತ್ತಿನವರೆಗಿನ ಬೆಳವಣಿಗೆಯ ಸೂಕ್ಷ್ಮ ಮಜಲುಗಳು. ಹಾಗೆ ನೋಡಲು ಹೋದರೆ ಕತಾರ್ ಸೌದಿಯ ಚಿಕ್ಕ ತಮ್ಮನಿದ್ದಂತೆ! ಈ ಅಣ್ಣ - ತಮ್ಮ ಬಾಂಧ್ಯವದಲ್ಲಿ ಬಿರುಕು ಏಕೆ ಮತ್ತು ಹೇಗೆ ಹುಟ್ಟಿತು? ಎನ್ನುವುದು ಕಥೆಯ ಮುಖ್ಯ ತಿರುಳು. ಜಗತ್ತಿಗೆ ಸೌದಿ ಮತ್ತು ಇತರ ಅರಬ್ ದೇಶಗಳು ನೀಡುತ್ತಿರುವ ಕಾರಣ ಕತಾರ್ ಭಯೋದ್ಪಾದನೆಗೆ ಕುಮ್ಮುಕ್ಕು ನೀಡುತ್ತಿದೆ ಎನ್ನುವುದು. ಇದೆಂತ ತಮಾಷೆ ನೋಡಿ ಜಗತ್ತಿಗೆ ಭಯೋತ್ಪಾದನೆಯ ಗುಮ್ಮನ ಪರಿಚಯಿಸಿದ ಕೀರ್ತಿ ಹೊಂದಿರುವ ದೇಶ ಇನ್ನೊಂದು ದೇಶವನ್ನ ಭಯೋದ್ಪಾದನೆಗೆ ಕುಮ್ಮುಕ್ಕು ನೀಡುತ್ತಿದೆ ಎನ್ನುವ ಆರೋಪ ಹೊರಿಸುತ್ತೆ.