ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆ ಸಿಇಒ ಸ್ಥಾನಕ್ಕೆ ಟ್ರಾವಿಸ್ ಕಲನಿಕ್ ರಾಜೀನಾಮೆ ನೀಡಿದ್ದಾರೆ.
ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳಗಳ ಆರೋಪ ಕೇಳಿಬಂದಿದ್ದರಿಂದ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಉಬರ್ ಸ್ಥಾಪಕ ಟ್ರಾವಿಸ್ ಕಲನಿಕ್ ತಿಳಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಷೇರುದಾರರ ಒತ್ತಡದಿಂದಾಗಿ ಟ್ರಾವಿಸ್ ಕಲನಿಕ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಬಗ್ಗೆ ಮಾತನಾಡಿರುವ ಕಲನಿಕ್, ನಾನು ಪ್ರಪಂಚದಲ್ಲಿ ಎಲ್ಲಕ್ಕಿಂತ ಹೆಚ್ಚು ಉಬರ್ ನ್ನು ಇಷ್ಟಪಡುತ್ತೇನೆ. ಹೂಡಿಕೆದಾರರ ಬೇಡಿಕೆಗೆ ಮಣಿದು ರಾಜೀನಾಮೆ ನೀಡುತ್ತಿರುವುದು ನನ್ನ ವೈಯಕ್ತಿಕ ಜೀವನದ ಅತ್ಯಂತ ಕಠಿಣವಾದ ಕ್ಷಣ ಎಂದು ಹೇಳಿದ್ದಾರೆ.
ಉಬರ್ ಇಂಜಿನಿಯರ್ ಆಗಿದ್ದ ಓರ್ವ ಮಹಿಳೆ ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದಾದ ಬಳಿಕ ಇನ್ನೂ ಹಲವರು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಇಒ ರಾಜೀನಾಮೆಗೆ ಒತ್ತಡ ಹೆಚ್ಚಿತ್ತು.