ರಿಪೇರಿಯಾದ ಗ್ಯಾಲೆಕ್ಸಿ ನೋಟ್ ೭ ಫೋನುಗಳನ್ನು ಮಾರಾಟ ಮಾಡಲಿರುವ ಸ್ಯಾಮ್ಸಂಗ್

ಬ್ಯಾಟರಿ ದೋಷದಿಂದ ವಿವಾದಕ್ಕೊಳಗಾಗಿದ್ದ ಮತ್ತು ಹಿಂತೆಗೆದುಕೊಂಡಿದ್ದ ಗ್ಯಾಲೆಕ್ಸಿ ನೋಟ್ ೭ ಮಾದರಿಯ ಎಲ್ಲ ಫೋನುಗಳ ದೋಷವನ್ನು ಸರಿಪಡಿಸಿದ್ದು, ಸ್ಯಾಮ್ಸಂಗ್ ಅವುಗಳನ್ನು ಮಾರುಕಟ್ಟೆಗೆ ಬಿಡಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಿಯೋಲ್: ಬ್ಯಾಟರಿ ದೋಷದಿಂದ ವಿವಾದಕ್ಕೊಳಗಾಗಿದ್ದ ಮತ್ತು ಹಿಂತೆಗೆದುಕೊಂಡಿದ್ದ  ಗ್ಯಾಲೆಕ್ಸಿ ನೋಟ್ ೭ ಮಾದರಿಯ ಎಲ್ಲ ಸ್ಮಾರ್ಟ್ ಫೋನುಗಳ ದೋಷವನ್ನು ಸರಿಪಡಿಸಿದ್ದು, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಅವುಗಳನ್ನು ಮಾರುಕಟ್ಟೆಗೆ ಬಿಡಲಿದೆ. ಚಾರ್ಜ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತಿದ್ದ ಈ ಫೋನ್ ಗಳನ್ನೂ ಹಿಂಪಡೆದಿದ್ದರಿಂದ ಸಂಸ್ಥೆಗೆ ಭಾರಿ ನಷ್ಟವಾಗಿತ್ತು. 
ಈಗ ಜುಲೈ ೭ ರಿಂದ ರಿಪೇರಿ ಮಾಡಲಾದ ಗ್ಯಾಲೆಕ್ಸಿ ನೋಟ್ ಎಫ್ ಇ ಫೋನುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. 
ಈ ಫೋನುಗಳ ಬೆಲೆಯನ್ನು ಇನ್ನು ನಿಗದಿಪಡಿಸಿಲ್ಲ ಎಂದು ಸ್ಯಾಮ್ಸಂಗ್ ವಕ್ತಾರ ತಿಳಿಸಿದ್ದರೂ, ಹಿಂದಿನ ಬೆಲೆಗಿಂತ ಸುಮಾರು ೩೫% ಕಡಿಮೆ ದರದಲ್ಲಿ ಈ ಫೋನು ಲಭ್ಯವಾಗಲಿದೆ ಎನ್ನುತ್ತವೆ ಮೂಲಗಳು. 
ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಈಗ ಸಿಯೋಲ್ ನಲ್ಲಿ ದ್ವೈವಾರ್ಷಿಕ ಸಮ್ಮೇಳನವನ್ನು ಆಯೋಜಿಸಿದ್ದು, ಅಲ್ಲಿ ತನ್ನ ಮುಂದಿನ ತಂತ್ರಗಾರಿಕೆ ಮತ್ತು ಹೊಸ ಫೋನುಗಳನ್ನು ಪರಿಚಯಿಸುವುದರ ಬಗ್ಗೆ ತಿಳಿಸಲಿದೆ. 
ಗ್ಯಾಲೆಕ್ಸಿ ನೋಟ್ ೭ ಫೋನುಗಳು ಬೆಂಕಿ ಹೊತ್ತಿಕೊಳ್ಳುತ್ತಿದ್ದರಿಂದ ಸ್ಯಾಮ್ಸಂಗ್ ಇವುಗಳ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿತ್ತು. ಈ ಫೋನುಗಳಲ್ಲಿದ್ದ ಬ್ಯಾಟರಿಯ ದೋಷದಿಂದ ಬೆಂಕಿ ಹೊತ್ತಿಕೊಳ್ಳುತ್ತಿರುವುದಾಗಿ ನಂತರದ ತನಿಖೆಯಲ್ಲಿ ತಿಳಿದುಬಂದಿತ್ತು. 
ಕಳೆದ ವರ್ಷ ಈ ಫೋನುಗಳನ್ನು ಹಿಂಪಡೆದ ಮೇಲೆ ಹಲವು ಪರಿಸರ ಸಂರಕ್ಷಣಾ ಸಂಸ್ಥೆಗಳು, ಎಲ್ಲ ೪೩ ಲಕ್ಷ ಫೋನುಗಳನ್ನು ರಿಪೇರಿ ಮಾಡಿ ಬಳಕೆಗೆ ಬಿಡಬೇಕು ಎಂದು ಸ್ಯಾಮ್ಸಂಗ್ ಸಂಸ್ಥೆಗೆ ಮನವಿ ಸಲ್ಲಿಸಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com