ಬದುಕನ್ನ ಬದಲಾಯಿಸಿಕೊಂಡ ಬೋಟ್ಸ್ವಾನ !

ಇವತ್ತಿನ ಲೇಖನದಲ್ಲಿ ನಾವು ಬೋಟ್ಸ್ವಾನ ಎನ್ನುವ ಕಡು ಬಡತನದಲ್ಲಿ ಬೇಯುತಿದ್ದ ದೇಶ ಹೇಗೆ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ ಎನ್ನುವ ಆರ್ಥಿಕ ಯಶೋಗಾಥೆ ತಿಳಿಯೊಣ.
ಬೋಟ್ಸ್ವಾನ
ಬೋಟ್ಸ್ವಾನ
ಜಗತ್ತಿಗೆ ಜಗತ್ತೇ ಬ್ರೆಝಿಲ್ , ರಷ್ಯಾ ,ಇಂಡಿಯಾ , ಚೀನಾ ಮತ್ತು ಸೌತ್ ಆಫ್ರಿಕಾ ಎನ್ನುವ ದೇಶಗಳನ್ನ ಬ್ರಿಕ್ಸ್ ದೇಶಗಳು ಎಂದು ಕರೆದು , ಇವು ಜಗತ್ತಿನ ಮುಂದಿನ ಆರ್ಥಿಕತೆಯ ಸರದಾರರು ಎಂದಿತು . ಅದು ಪೂರ್ಣ ಸುಳ್ಳು ಅಂತಲ್ಲ , ಆದರೆ ಆಫ್ರಿಕಾ ಖಂಡದ ಹಲವು ದೇಶಗಳು ವಿಶ್ವ ಹೂಡಿಕೆದಾರರ ಹೊಸ ಡಾರ್ಲಿಂಗ್ ಆಗಿದೆ . ಹೂಡಿಕೆದಾರರ ವಲಯದಲ್ಲಿ ಈ ದೇಶಗಳನ್ನ ಆಫ್ರಿಕನ್ ಲಯನ್ಸ್ ಎನ್ನುತ್ತಾರೆ . ಇವತ್ತಿನ ಲೇಖನದಲ್ಲಿ ನಾವು ಬೋಟ್ಸ್ವಾನ ಎನ್ನುವ  ಕಡು ಬಡತನದಲ್ಲಿ ಬೇಯುತಿದ್ದ ದೇಶ ಹೇಗೆ ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ಬೆಳೆದಿದೆ ಎನ್ನುವ ಆರ್ಥಿಕ  ಯಶೋಗಾಥೆ ತಿಳಿಯೊಣ . 
ಬೋಟ್ಸ್ವಾನ ಆಫ್ರಿಕಾ ಖಂಡದ ಒಂದು ದೇಶ . ದಕ್ಷಿಣ ಆಫ್ರಿಕಾ ದೇಶಕ್ಕೆ ಸರಹದ್ದು ಹಂಚಿಕೊಂಡಿರುವ ಈ ಪುಟ್ಟ ದೇಶದ ಜನಸಂಖ್ಯೆ 22 ಲಕ್ಷ . ಈ ದೇಶದ  ನೆಲದ ಎಪ್ಪತ್ತು ಭಾಗ  ಮರಳುಗಾಡು . 1966 ರಲ್ಲಿ ಬ್ರಿಟಿಷರಿಂದ  ಸ್ವತಂತ್ರ ಪಡೆದಾಗ ಇಲ್ಲಿನ ಜನರ ವಾರ್ಷಿಕ ತಲಾದಾಯ 70 ಡಾಲರ್ ಅಂದರೆ  ವರ್ಷಕ್ಕೆ 1300 ರೂಪಾಯಿ ಆಸುಪಾಸು . ಛೆ .. ಎಂದು ಅವರ ಬಗ್ಗೆ ಮರುಗದಿರಿ  ಇಂದಿನ ಅವರ ವಾರ್ಷಿಕ ತಲಾದಾಯ ಹತ್ತಿರ ಹತ್ತಿರ 20 ಸಾವಿರ ಡಾಲರ್  ಅಂದರೆ 13 ಲಕ್ಷದ ಆಸುಪಾಸು .. ಅಚ್ಚರಿಯಾಯ್ತಾ ? ಇದು ಯಾವುದೋ ಚಲನಚಿತ್ರದ ಕಥೆಯಲ್ಲ , ಆಫ್ರಿಕಾ ಖಂಡದ ಹಲವು ದೇಶಗಳ ಯಶೋಗಾಥೆ . ಬೋಟ್ಸ್ವಾನ ಅವರೆಲ್ಲರ ನಾಯಕನಂತೆ ಮುಂದಿನ ಸಾಲಿನಲ್ಲಿ ನಿಂತಿದೆ . 
ಈ ಪರಿಯ ಯಶಸ್ಸು ಪಡೆಯಲು ಅವರೇನು ಮಾಡಿದರು ? 
ಎಲ್ಲಕ್ಕೂ ಮೊದಲು ಪಾರದರ್ಶಕತೆ ಇವರ ಯಶಸ್ಸಿನ ಬಂಡವಾಳ . ಅಂದರೆ ಅಲ್ಲಿ ಕದ್ದು ಮುಚ್ಚಿ ಮಾಡಲು ಏನೂ ಇಲ್ಲ ಎಲ್ಲಕ್ಕೂ ಇಂತಿಷ್ಟು ಎನ್ನುವ ತೆರಿಗೆ ಉಂಟು , ವ್ಯಾಪಾರ ತೆರೆಯಲು ಸರಳ ನೀತಿಗಳಿವೆ ಅವನ್ನ ಅನುಸರಿಸಿ ಯಾರು ಬೇಕಾದರೂ ವ್ಯಾಪಾರ ಶುರು ಮಾಡಬಹದು . ಮತ್ತೊಂದು ಮುಖ್ಯ ಕಾರಣ ಲಂಚಗುಳಿತನ ಅಥವಾ ಕರಪ್ಶನ್ ಇಲ್ಲ ಎನ್ನುವಷ್ಟು , ಎಷ್ಟೋ ಯೂರೋಪಿಯನ್ ದೇಶಗಳಿಗಿಂತ ಉತ್ತಮ ಎನ್ನಿಸುವಷ್ಟು ಎಂದರೆ ಆಶ್ಚರ್ಯ ಆಗಬಹದು ಆದರೆ ಇದು ನಿಜ . 
ಅಲ್ಲದೆ ಜೇಬಿಗೆ ಹೆಚ್ಚು ಭಾರವಲ್ಲದ ತೆರಿಗೆ ನೀತಿ ಜಗತ್ತಿನ ಹಲವು ಕಂಪನಿಗಳು ಅತ್ತ ಮುಖ ಮಾಡುವಂತೆ ಮಾಡಿದೆ . ಸರ್ಟಿಫೈಡ್ ಫೈನಾನ್ಸಿಯಲ್ ಸರ್ವಿಸ್ ಸೆಂಟರ್(IFSC ) ಕಂಪನಿಗಳು ಹಲವು ವಿನಾಯ್ತಿ ಹೊಂದಿವೆ . ಈ ಕಂಪನಿಗಳು ಕಾರ್ಪೊರೇಟ್ ಟ್ಯಾಕ್ಸ್ ಕೇವಲ 15 ಪ್ರತಿಶತ. ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ಅಥವಾ VAT  ಸೊನ್ನೆ, ಕ್ಯಾಪಿಟಲ್ ಗೈನ್ ತೆರಿಗೆಯಿಂದ ಮುಖ್ತ . ವಿಥ್ ಹೋಲ್ಡ್ ಟ್ಯಾಕ್ಸ್ ಕೂಡ ವಿನಾಯ್ತಿ ಹೊಂದಿದೆ .  ಆಕಸ್ಮಾತ್ ನಿಮ್ಮದು IFSC ಕಂಪನಿ ಅಲ್ಲದಿದ್ದರೂ ಕಾರ್ಪೊರೇಟ್ ಟ್ಯಾಕ್ಸ್ ಹೆಚ್ಚೇನಿಲ್ಲ 15 ರ ಬದಲು 22 ಪ್ರತಿಶತ. ಜಗತ್ತಿನ ಹಲವು ದೇಶಗಳಿಗಿಂತ ಬಹು ಕಡಿಮೆ. 
ಅಂತಾರಾಷ್ಟ್ರೀಯ ಇನ್ಶೂರೆನ್ಸ್ ಕಂಪನಿಗಳಿಗೆ , ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಕಂಪನಿಗಳು , ಬಿಸಿನೆಸ್ ಔಟ್ಸೌರ್ಸ್ (ಹೊರಗುತ್ತಿಗೆ ) ಕಾಲ್ ಸೆಂಟರ್ ಇವುಗಳು ಮತ್ತು ಅಂತರರಾಷ್ಟ್ರೀಯ ಕಂಪನಿಗಳ ಹೋಲ್ಡಿಂಗ್ ಕಂಪನಿಗಳಿಗೆ ಇದು ನೆಲೆಯಾಗುತ್ತಿದೆ . 
ಹೂಡಿಕೆ ಯಾವ ಕ್ಷೇತ್ರದಲ್ಲಿ ಮಾಡಬಹುದು?  
  • ಮೆಡಿಕಲ್ ಟೂರಿಸಂ  ವಾರ್ಷಿಕವಾಗಿ 20 ರಿಂದ 30 ಪ್ರತಿಶತ ಬೆಳೆಯುತ್ತ ಬರುತ್ತಿದೆ . ಇಂದಿಗೆ 100 ಬಿಲಿಯನ್ ಅಮೇರಿಕನ್ ಡಾಲರ್ ಮೀರಿದ ವಹಿವಾಟು ಹೊಂದಿರುವ ಕ್ಷೇತ್ರ . ಬೋಟ್ಸ್ವಾನ ತನ್ನ ದೇಶದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಅನುದಾನ ನೀಡುವ ಬಯಕೆ ಹೊಂದಿದೆ . ಡೈಯಾಗ್ನೋಸ್ಟಿಕ್ ಮತ್ತು ಲ್ಯಾಬರೊಟರಿ ಗಳನ್ನ ತೆರೆಯಲು ಮುಖ್ತ ಅವಕಾಶವಿದೆ . 
  •  ಹೊಸ ಆವಿಷ್ಕಾರ , ಸಂಶೋಧನಾ ಕ್ಷೇತ್ರಗಳಿಗೆ ಹೆಚ್ಚು ಉತ್ತೇಜನ. 
  •  ಮೈನಿಂಗ್ , ಗಣಿಗಾರಿಕೆಯಲ್ಲಿ ಕೂಡ ಹೆಚ್ಚಿನ ಅವಕಾಶಗಳಿವೆ . ಡೈಮಂಡ್ ಕಟಿಂಗ್ , ಪಾಲಿಶಿಂಗ್ ಇವುಗಳಲ್ಲಿ ಕೂಡ ಹೂಡಿಕೆಗೆ ಮುಕ್ತ   ಅವಕಾಶವಿದೆ . ಬೋಟ್ಸ್ವಾನ ದ ಹೆಚ್ಚು ಆರ್ಥಿಕತೆ ನಿಂತಿರುವುದು ಡೈಮಂಡ್ ಉದ್ಯಮದ ಮೇಲೆ . ಅಲ್ಲದ್ದೆ ಇವರ ಆರ್ಥಿಕತೆಯ ತೊಬತ್ತೈದಕ್ಕೂ ಹೆಚ್ಚು ಭಾಗ ಎಕ್ಸ್ಪೋರ್ಟ್ ನಿಂದ ಎನ್ನುವುದು ಗಮನಿಸಬೇಕಾದ ಅಂಶ . 
  • ಟೂರಿಸಂ ಇನ್ನೊಂದು ಅತಿ ಮುಖ್ಯ ಕ್ಷೇತ್ರ . ಇತರ ಆಫ್ರಿಕನ್ ದೇಶಗಳಂತೆ ಬೋಟ್ಸ್ವಾನ ಕೂಡ ದಟ್ಟ ಕಾಡು ಮತ್ತು ಅಲ್ಲಿನ ಪ್ರಾಣಿ ಪಶುಗಳನ್ನ ನೈಸರ್ಗಿಕವಾಗಿ ಪಡೆದು ಕೊಂಡಿದೆ ಅಷ್ಟೇ ಅಲ್ಲದೆ ಅದನ್ನ ಹೇಗೆ ತನ್ನ ಒಳಿತಿಗೆ ಬಳಸಿಕೊಳ್ಳಬೇಕು ಎನ್ನುವ ಅರಿವು ಕೂಡ ಅದಕ್ಕಿದೆ . ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ . 
  •  ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಉತ್ತಮ ಭವಿಷ್ಯ ಹೊಂದಿದೆ . ಬೋಟ್ಸ್ವಾನಾದ 66 ಪ್ರತಿಶತ ಜನ ಬದುಕುವುದು ನಗರ ಪ್ರದೇಶದಲ್ಲಿ . ನಗರೀಕರಣ ತೀವ್ರ ಗತಿಯಲ್ಲಿ ಆಗುತ್ತಿರುವುದರಿಂದ ಈ ಕ್ಷೇತ್ರ ಕೂಡ ಅಷ್ಟೇ ವೇಗದಲ್ಲಿ ಬೆಳೆಯುತ್ತಿದೆ . 
  • ಹೀಗೆ ಸಾಕಷ್ಟು ವಲಯಗಳನ್ನ ವಿವರಿಸುತ್ತಾ ಹೋಗಬಹುದು . ಇವೆಲ್ಲದರ ಅರ್ಥ ಇಷ್ಟೇ ಒಂದು ದೇಶ  ಜನಾಂಗ ಏನ್ನನ್ನಾದರೂ ಸಾಧಿಸಬೇಕು ಎಂದರೆ ಖಂಡಿತ ಅದನ್ನ ಸಾಧಿಸಬಹದು ಎನ್ನುವುದಕ್ಕೆ ಉದಾಹರಣೆಯಾಗಿ ಬೋಟ್ಸ್ವಾನ ನಿಂತಿದೆ . ಆರ್ಥಿಕ ತಜ್ಞರ ಪಾಲಿಗೆ ಈ ದೇಶ ಕೇಸ್ ಸ್ಟಡಿ ಎಂದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ . 
  • ತೆರಿಗೆಯಲ್ಲಿ ವಿನಾಯ್ತಿ , ಪಾರದರ್ಶಕತೆ ಇದ್ದರಷ್ಟೇ ಸಾಲದು ಜೊತೆಗೆ ಉತ್ತಮ ರಾಜಕೀಯ ಸ್ಥಿರತೆ ಅತ್ಯಂತ ಅವಶ್ಯಕ . ಬೋಟ್ಸ್ವಾನ ಈ ಅಂಶದಲ್ಲಿ ಹೆಚ್ಚು ಅದೃಷ್ಟವಂತ ದೇಶ ಎನ್ನಬಹದು . ಸ್ವತಂತ್ರ ಬಂದ ಹೊಸದರಲ್ಲಿ ಇದ್ದ ಪರಿಸ್ಥಿತಿಯಿಂದ ಹೊರಬಂದ ಈ ದೇಶ ಜಗತ್ತಿಗೆ , ಜಗತ್ತಿನ ಆರ್ಥಿಕ ತಜ್ಞರ ಹುಬ್ಬೇರುವಂತೆ ಬೆಳೆದಿದೆ , ಬೆಳೆಯುತ್ತಿದೆ . 
  • 2008 ರಿಂದ ಈಚೆಗೆ ಶುರುವಾದ ಆರ್ಥಿಕ ತಲ್ಲಣ ವಿಶ್ವವನ್ನೆ ನಡುಗಿಸಿದ್ದು ಮತ್ತು  ಅಮೇರಿಕಾ , ಯೂರೋಪಿನ ಹಲವು ದೇಶಗಳು ಇನ್ನೂ ಅದರ ಹೊಡೆತದಿಂದ ಹೊರಬರಲು ಹೆಣಗುತ್ತಿರುವಾಗ ಬೋಟ್ಸ್ವಾನ  ಈ ಹೊಡೆತದಿಂದ ಹೊರಬಂದಿದೆ . ಇದರ ಆರ್ಥಿಕತೆ ನಿಧಾನವಾಗಿ ಮತ್ತೆ ಏರುಗತಿಯತ್ತ ಸಾಗಿದೆ . 16 ಬಿಲಿಯನ್ ಜಿಡಿಪಿ ಹೊಂದಿ 2016 ರ ಆಫ್ರಿಕಾ ದಲ್ಲಿ ವ್ಯಾಪಾರ ಮಾಡಲು ಎರಡನೇ ಅತಿ ಉತ್ತಮ ದೇಶ ಎನ್ನುವ ಹೆಗ್ಗಳಿಕೆಯನ್ನ ತನ್ನದಾಗಿಸಿಕೊಂಡಿದೆ . ದಕ್ಷಿಣ ಆಫ್ರಿಕಾ ಮೊದಲನೇ ಸ್ಥಾನದಲ್ಲಿ ಅಭಾದಿತವಾಗಿದೆ . 
  • ಆಫ್ರಿಕಾ ಎಂದ ತಕ್ಷಣ ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವ ಮಗುವಿನ ಚಿತ್ರಣ ಕಟ್ಟಿಕೊಡುವ NGO ಗಳ ಕಣ್ಣಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಆಫ್ರಿಕಾ ಕಣ್ಣಿಗೇಕೆ ಬೀಳುವುದಿಲ್ಲ ಎನ್ನುವುದು ಪ್ರಶ್ನೆ .ಹಾಗೆಂದ ಮಾತ್ರಕ್ಕೆ ಎಲ್ಲವೂ ಅತ್ಯಂತ ಸುಂದರ , ಸ್ಥಿರ ಅಂತಲ್ಲ , ಇಂದಿಗೂ ಆಫ್ರಿಕಾ ದೇಶಗಳು ಹಲವು ಜ್ವಲಂತ ಸಮಸ್ಯೆಗಳನ್ನ ಎದಿರಿಸುತ್ತಿದೆ . ಸಮಸ್ಯೆ ಪೂರ್ಣ ಮುಗಿದುಹೋಗುವ ವಿಷಯವೇ ಅಲ್ಲ . ಆರ್ಥಿಕವಾಗಿ ನಿಸ್ತೇಜವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಲೆಕ್ಕಕಿಲ್ಲದ ದೇಶಗಳು ಇಂದು ತಮ್ಮ ಇರುವಿಕೆಯನ್ನ ಸಾರುತ್ತಿರುವ ರೀತಿಯೆ ಒಂದು ಖುಷಿ , ಹೊಸ ಚೈತನ್ಯ ನೀಡುತ್ತದೆ . 
 ಜಾಂಬಿಯಾ ಎನ್ನುವ ಇನ್ನೊಂದು ಆಫ್ರಿಕನ್ ದೇಶದ ಬದಲಾವಣೆಯ ಕಥೆಯನ್ನ ಮುಂದಿನವಾರ ನೋಡೋಣ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com