ಜಿಎಸ್‏ಟಿ ತೆರಿಗೆ: ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ...

ಸರಕು ಮತ್ತು ಸೇವಾ ತೆರಿಗೆಯಡಿ(ಜಿಎಸ್ಟಿ) ವಿವಿಧ ಸೇವೆಗಳ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಬಡ್ಡಿದರಗಳನ್ನು...
ಜಿಎಸ್ ಟಿ ಮಂಡಳಿ ಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ
ಜಿಎಸ್ ಟಿ ಮಂಡಳಿ ಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ
 ಶ್ರೀನಗರ: ಸರಕು ಮತ್ತು ಸೇವಾ ತೆರಿಗೆಯಡಿ ವಿವಿಧ ಸೇವೆಗಳ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಬಡ್ಡಿದರಗಳನ್ನು ಇಂದು ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಈ ತೆರಿಗೆಗಳು ಜುಲೈ 1ರಿಂದ ಜಾರಿಗೆ ಬರಲಿವೆ.
ವಿವಿಧ ಸೇವೆಗಳಿಗೆ ಶೇಕಡಾ 5,12, 18 ಮತ್ತು ಶೇಕಡಾ 28ರ ನಾಲ್ಕು ಹಂತದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಜಿಎಸ್ ಟಿ ಮಂಡಳಿ ಜೂನ್ 3ರಂದು ಮತ್ತೆ ಸಭೆ ಸೇರಲಿದೆ.
ಸರಕು ಮತ್ತು ಸೇವಾ ತೆರಿಗೆಯಿಂದ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜೇಟ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಫೆಡರಲ್ ಮತ್ತು ರಾಜ್ಯ ಹಣಕಾಸು ಮಂತ್ರಿಗಳನ್ನೊಳಗೊಂಡು ಸಭೆ ನಡೆದಿದ್ದು ಜಿಎಸ್ ಟಿಯಡಿ 1,200ಕ್ಕೂ ಅಧಿಕ ವಸ್ತುಗಳಿಗೆ ತೆರಿಗೆ ದರಗಳನ್ನು ನಿಗದಿಪಡಿಸಲಾಯಿತು. ಕೆಲವು ರಾಜ್ಯಗಳ ಹಣಕಾಸು ಸಚಿವರು ಅಗತ್ಯ ವಸ್ತುಗಳ ಮೇಲೆ ಕಡಿಮೆ ತೆರಿಗೆ ದರ ನಿಗದಿಪಡಿಸುವಂತೆ ಒತ್ತಾಯಿಸಿದರು.
ಯಾವ್ಯಾವ ವಸ್ತುಗಳಿಗೆ ಎಷ್ಟೆಷ್ಟು ತೆರಿಗೆ: 
1.ಟೆಲಿಕಾಂ, ಹಣಕಾಸು ಸೇವೆಗಳಿಗೆ ಶೇಕಡಾ 1 8ರಷ್ಟು ತೆರಿಗೆ.
2. ಜಿಎಸ್ ಟಿಯಡಿ ಸೇವಾ ತೆರಿಗೆ ಜೊತೆ ಮನರಂಜನಾ ತೆರಿಗೆ ವಿಲೀನ. ಸಿನಿಮಾ ಸೇವೆಗಳಿಗೆ ಶೇಕಡಾ 28ರಷ್ಟು ಸಂಯುಕ್ತ ತೆರಿಗೆ.
3. ಚಿನ್ನದ ಮೇಲಿನ ತೆರಿಗೆ ನಿಗದಿಪಡಿಸಿಲ್ಲ.
4. ಒಲಾ, ಉಬರ್ ಮೊದಲಾದ ಕ್ಯಾಬ್ ಗಳ ಮೇಲೆ ಶೇಕಡಾ 5 ತೆರಿಗೆ,
5. ಎಸಿ ರೆಸ್ಟೋರೆಂಟ್, ಮದ್ಯ ಮಾರಾಟ ಮಾಡುವ ಬಾರ್ ಗಳಿಗೆ ಶೇಕಡಾ 18 ತೆರಿಗೆ. ಫೈವ್ ಸ್ಟಾರ್ ಹೊಟೇಲ್ ಗಳಿಗೆ ಶೇಕಡಾ 28ರಷ್ಟು ತೆರಿಗೆ.
6. ಆರೋಗ್ಯ ಸೇವೆ ಮತ್ತು ಶಿಕ್ಷಣಕ್ಕೆ ಜಿಎಸ್ ಟಿಯಿಂದ ವಿನಾಯ್ತಿ.
7. ವಿಮಾನಯಾನದ ಎಕಾನಮಿ ಕ್ಲಾಸ್ ಗೆ ಶೇಕಡಾ 5 ತೆರಿಗೆ; ಬ್ಯುಸಿನೆಸ್ ಕ್ಲಾಸ್ ಗೆ ಶೇಕಡಾ 12 ತೆರಿಗೆ.
8. ಮೆಟ್ರೊ, ಲೋಕಲ್ ಟ್ರೈನ್, ಧಾರ್ಮಿಕ ಪ್ರಯಾಣ, ಹಜ್ ಯಾತ್ರೆಗಳಿಗೆ ಕೂಡ ತೆರಿಗೆಯಿಂದ ವಿನಾಯ್ತಿ.
ವೈಟ್ ವಾಷ್ ನಂತಹ ಕೆಲಸದ ಕಾಂಟ್ರ್ಯಾಕ್ಟ್ ಗೆ ಶೇಕಡಾ 12ರಷ್ಟು ತೆರಿಗೆ.
9. ದಿನಕ್ಕೆ 1,000 ರೂಪಾಯಿ ತೆರಿಗೆ ವಿಧಿಸುವ ಹೊಟೇಲ್ ಗಳು, ಲಾಡ್ಜ್ ಗಳಿಗೆ ಜಿಎಸ್ ಟಿಯಿಂದ ವಿನಾಯ್ತಿ. ಸಾವಿರದಿಂದ ಎರಡು ಸಾವಿರ ದರ ವಿಧಿಸುವ ಹೊಟೇಲ್, ಲಾಡ್ಜ್ ಗಳಿಗೆ ಶೇಕಡಾ 12ರಷ್ಟು, 2,500ರಿಂದ 5,000ದವರೆಗಿನ ದರಗಳಿಗೆ ಶೇಕಡಾ 18ರಷ್ಟು, 5,000ಕ್ಕಿಂತ ಹೆಚ್ಚು ದರ ವಿಧಿಸುವ ಹೊಟೇಲ್ ಗಳಿಗೆ ಶೇಕಡಾ 28ರಷ್ಟು ತೆರಿಗೆ ವಿಧಿಸಲಾಗುತ್ತದೆ. ಸಣ್ಣ ರೆಸ್ಟೋರೆಂಟ್  ಗಳಿಗೆ ಶೇಕಡಾ 5ರಷ್ಟು ತೆರಿಗೆ. 
10. ಲಾಟರಿ ಮೇಲೆ ಯಾವುದೇ ತೆರಿಗೆಯಿರುವುದಿಲ್ಲ.
11. ಧಾನ್ಯಗಳು, ಮೊಟ್ಟೆಗಳು ಮತ್ತು ಮಾಂಸದಂತಹ ಮೂಲಭೂತ ಆಹಾರ ಪದಾರ್ಥಗಳಿಗೆ ತೆರಿಗೆಯಿರುವುದಿಲ್ಲ. ಸಂಸ್ಕರಿತ ಆಹಾರ ಪದಾರ್ಥಗಳಿಗೆ ಶೇಕಡಾ 12ರಿಂದ ಶೇಕಡಾ 28ರವರೆಗೆ ತೆರಿಗೆಯಿರುತ್ತದೆ. 
12. ಬಹುತೇಕ ಸಾರಿಗೆ ಸೇವೆಗಳಿಗೆ ಶೇಕಡಾ 5ರಷ್ಟು ತೆರಿಗೆ.
13. ಎಸಿ ರಹಿತ ರೈಲುಗಳಲ್ಲಿ ಪ್ರಯಾಣಿಸಿದವರಿಗೆ ತೆರಿಗೆ ವಿನಾಯ್ತಿ, ಎಸಿ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಶೇಕಡಾ 5ರಷ್ಟು ತೆರಿಗೆ.  
14. ಜೂನ್ 3ರಂದು ನಡೆಯುವ ಸಭೆಯಲ್ಲಿ ಚಿನ್ನ ಮತ್ತು ಅತ್ಯಮೂಲ್ಯ ಲೋಹಗಳಿಗೆ ತೆರಿಗೆ ದರ ನಿರ್ಧರಿಸಲಾಗುತ್ತದೆ.
15. ಜನರು ಉಪಯೋಗಿಸುವ ಸೋಪು, ಎಣ್ಣೆ ಮೇಲೆ ಶೇಕಡಾ 18 ತೆರಿಗೆ. 
ಒಟ್ಟಾರೆಯಾಗಿ ಶೇಕಡಾ 7ರಷ್ಟು ಆಹಾರ ವಸ್ತುಗಳಿಗೆ ತೆರಿಗೆ ವಿನಾಯ್ತಿ, ಶೇಕಡಾ 14ರಷ್ಟು ವಸ್ತುಗಳಿಗೆ ಶೇಕಡಾ 5ರಷ್ಟು ತೆರಿಗೆ, ಶೇಕಡಾ 17 ವಸ್ತುಗಳಿಗೆ ಶೇಕಡಾ 12ರಷ್ಟು ತೆರಿಗೆ, ಶೇಕಡಾ 43ರಷ್ಟು ವಸ್ತುಗಳಿಗೆ ಶೇಕಡಾ 18ರಷ್ಟು ತೆರಿಗೆ ಮತ್ತು ಶೇಕಡಾ 19ರಷ್ಟು ವಸ್ತುಗಳಿಗೆ ಶೇಕಡಾ 28ರಷ್ಟು ತೆರಿಗೆ. ಶೇಕಡಾ 81ರಷ್ಟು ವಸ್ತುಗಳಿಗೆ ಶೇಕಡಾ 18 ಅಥವಾ ಅದಕ್ಕಿಂತಲೂ ಕಡಿಮೆ ತೆರಿಗೆ ಇರುತ್ತದೆ ಎಂದರು ಕಂದಾಯ ಇಲಾಖೆ ಕಾರ್ಯದರ್ಶಿ ಹಮ್ಸುಕ್ ಅದಿಯಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com