ಜನವರಿ-ಡಿಸೆಂಬರ್ ಆರ್ಥಿಕ ವರ್ಷ ಬದಲಾವಣೆ ಕಾರ್ಯಗಳಿಗೆ ಸರ್ಕಾರದ ಚಾಲನೆ

ಹಣಕಾಸು ವರ್ಷದ ಆರಂಭವನ್ನು ಏಪ್ರಿಲ್ ನಿಂದ ಜನವರಿಗೆ ಬದಲಾಯಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ...
ಕೇರಳದ ಇಡುಕ್ಕಿ ಜಿಲ್ಲೆಯ ಕೊವಿಲೂರಿನಲ್ಲಿ ಚಳಿಗಾಲದಲ್ಲಿ ತರಕಾರಿ ತೋಟದ ಒಂದು ನೋಟ
ಕೇರಳದ ಇಡುಕ್ಕಿ ಜಿಲ್ಲೆಯ ಕೊವಿಲೂರಿನಲ್ಲಿ ಚಳಿಗಾಲದಲ್ಲಿ ತರಕಾರಿ ತೋಟದ ಒಂದು ನೋಟ
ನವದೆಹಲಿ:  ಹಣಕಾಸು ವರ್ಷದ ಆರಂಭವನ್ನು ಏಪ್ರಿಲ್ ನಿಂದ ಜನವರಿಗೆ ಬದಲಾಯಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಕೃಷಿ ಉತ್ಪಾದನೆ ಕಾಲಚಕ್ರದೊಂದಿಗೆ ಸೇರಿಸಲು ಚಿಂತನೆ ನಡೆಯುತ್ತಿದೆ. 
ಜನವರಿಯಿಂದ ಡಿಸೆಂಬರ್ ವರೆಗೆ ಹಣಕಾಸು ವರ್ಷವನ್ನಾಗಿ ಬದಲಾಯಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿಂತನೆಯನ್ನು ಕಳೆದ ತಿಂಗಳು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನೊಳಗೊಂಡ ನೀತಿ ಆಯೋಗದ ಸಭೆಯಲ್ಲಿ ಸೂಚಿಸಿದ್ದರು.
ಪ್ರಾಥಮಿಕ ಕೆಲಸ ಆರಂಭಗೊಂಡಿದೆ. ಮುಂದಿನ ಜುಲೈ 1ರಿಂದ ಜಾರಿಗೆ ಬರುವ ಸರಕು ಮತ್ತು ಸೇವಾ ತೆರಿಗೆ ಜಾರಿ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಕ್ಯಾಲೆಂಡರ್ ವರ್ಷದ ಎರಡನೇ ಅವಧಿಯಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.
ಈಗಿರುವ ಪದ್ಧತಿಯಂತೆ ಹಣಕಾಸು ವರ್ಷ ಆರಂಭವಾಗುವ ಏಪ್ರಿಲ್ 1ರಿಂದ ಜನವರಿ 1ಕ್ಕೆ ಬದಲಾಯಿಸುವ ಸಾಧ್ಯತೆಗಳನ್ನು ಅಧ್ಯಯನ ನಡೆಸಲು ಸರ್ಕಾರ ಕಳೆದ ವರ್ಷ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿತ್ತು. ಸಮಿತಿ ಕಳೆದ ಡಿಸೆಂಬರ್ ನಲ್ಲಿ ವರದಿಯನ್ನು ಮಂಡಿಸಿತ್ತು.  ವಿವಿಧ ಕೃಷಿ ಬೆಳೆಗಳ ಅವಧಿಗಳ ಮೇಲೆ ಇದರ ಪರಿಣಾಮ ಮತ್ತು ವ್ಯಾಪಾರ, ವಹಿವಾಟಿನ ಮೇಲೆ ಅದರ ಪರಿಣಾಮ, ತೆರಿಗೆ ವ್ಯವಸ್ಥೆ ಮತ್ತು ಪ್ರಕ್ರಿಯೆಗಳು, ಅಂಕಿಅಂಶಗಳು ಮತ್ತು ದಾಖಲೆಗಳ ಸಂಗ್ರಹದ ಮೇಲಿನ ಪರಿಣಾಮಗಳ ಕುರಿತು ಸಮಿತಿ ವರದಿ ಸಲ್ಲಿಸಿದೆ.
ಕೃಷಿ ಆದಾಯಗಳು ಅತ್ಯಂತ ಪ್ರಮುಖವಾಗಿರುವ ಭಾರತದಂತಹ ದೇಶಗಳಲ್ಲಿ ಕೃಷಿ ಆದಾಯಗಳು ಬಂದ ತಕ್ಷಣ ಬಜೆಟ್ ನ್ನು ತಯಾರಿಸಬೇಕು. ಜನವರಿಯಿಂದ ಡಿಸೆಂಬರ್ ವರೆಗೆ ಹಣಕಾಸು ವರ್ಷವನ್ನು ಅನುಸರಿಸಲು ಎಲ್ಲಾ ರಾಜ್ಯಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳ ನೀತಿ ಆಯೋಗದ ಸಭೆಯಲ್ಲಿ ಒತ್ತಾಯಿಸಿದ್ದರು.
ಪ್ರಧಾನಿಯವರ ಸೂಚನೆಯನ್ನು ಮೊತ್ತಮೊದಲ ಬಾರಿಗೆ ಅನುಸರಿಸಿದ ಮಧ್ಯ ಪ್ರದೇಶ ಸರ್ಕಾರ ಬಜೆಟ್ ಕಾಲಾವಧಿಯನ್ನು ಈಗಿರುವ ಏಪ್ರಿಲ್-ಮಾರ್ಚ್ ಗೆ ಬದಲಾಗಿ ಜನವರಿ-ಡಿಸೆಂಬರ್ ಗೆ ಬದಲಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com